Thursday, August 27, 2015

ಚಾತಕ ಪಕ್ಷಿ, ಚೊಟ್ಟಿ ಕೋಗಿಲೆ
Pied crested cuckoo (Clamator jacobinus) 
ಪ್ರಿಯೆ ನಿನಗಾಗಿ ನಾನು ಚಾತಕ ಪಕ್ಷಿಯಂತೆ ಕಾಯುತ್ತಿದ್ದೇನೆ…ಎಂದು ಹುಡುಗ ತನ್ನ ಹುಡುಗಿಗೆ ಹೇಳುವುದುಂಟು. ಅದುಮನುಷ್ಯರ ಲೋಕದಲ್ಲಿ. ಆದರೆ ಒಂದು ಜಾತಿಯ ಪಕ್ಷಿಯೂ ಮಳೆ ಹನಿಗಾಗಿ ನಿರಂತರವಾಗಿ ಕಾಯುತ್ತಿರುತ್ತದೆ. ಚಾತಕ ಎಂದರೆ ಸಂಸ್ಕೃತದಲ್ಲಿ ಕಾಯುವುದು ಎಂದರ್ಥ. ಮಳೆಗಾಗಿ ಈ ಹಕ್ಕಿಯೂ ಕಾಯುವುದರಿಂದ ಚಾತಕ ಪಕ್ಷಿ ಎಂದು ಹೆಸರು ಬಂದಿದೆ.
ಚೊಟ್ಟಿ ಕೋಗಿಲೆ, ಚಾತಕ ಪಕ್ಷಿಗೆ ಇಂಗ್ಲೀಷ್ನಲ್ಲಿ ಪಯ್ಡ್ ಕುಕ್ಕೂ ಅಥವಾ ಜಾಕೊಬಿನ್ ಕುಕ್ಕೂ ಎಂದು ಕರೆಯುತ್ತಾರೆ. ಅಲ್ಲದೆ ಪಪೀಹಾ, ಕರಿ ಜುಟ್ಟು, ಗಲಾಟೆ ಕೋಗಿಲೆ ಅಂತಲೂ ಹೇಳುತ್ತಾರೆ. ಮಳೆಗೂ ಚಾತಕಪಕ್ಷಿಗೂ ಅವಿನಾಭಾವ ಸಂಬಂಧ. ಮಳೆಗಾಲದ ಆಗಮನವನ್ನು ಸಾರುವ ಅಂದರೆ ಮಳೆ ಮುನ್ಸೂಚನೆ ಕೊಡುವ ಈ ಹಕ್ಕಿ ಹೆಚ್ಚಾಗಿ ಮಳೆ ನೀರನ್ನು ಕುಡಿದು ಜೀವಿಸುತ್ತದೆ ಎಂದು ನಂಬಿದ್ದಾರೆ. ಜಾನಪದದಿಂದ ಹಿಡಿದು ಪುರಾಣಗಳಲ್ಲೂ ಈ ಹಕ್ಕಿ ತನ್ನದೆ ಆದ ವಿಶೇಷ ಸ್ಥಾನ ಪಡೆದುಕೊಂಡಿದೆ ಮಹಾಕವಿ ಕಾಳಿದಾಸನೂ ಮೇಘದೂತ ಕಾವ್ಯದಲ್ಲಿಯೂ ಈ ಹಕ್ಕಿಯ ಬಗ್ಗೆ ವರ್ಣಿಸಿದ್ದಾನೆ.
ಕೋಗಿಲೆ ಜಾತಿಯದ್ದೆ ಆದ್ದರಿಂದ ಮೈ ಬಣ್ಣ ಕೋಗಿಲೆಯಂತೆಯೇ ಕಪ್ಪು ಉದ್ದ ಬಾಲದ ಮೈನಾ ಹಕ್ಕಿಗಾತ್ರದ ಹಕ್ಕಿ. ಕತ್ತಿನ ಕೆಳಭಾಗದಲ್ಲಿ ಬಿಳಿ ಮತ್ತು ಹಳದಿ ಬಣ್ಣದ ಮಿಶ್ರಣವಿದೆ. ತಲೆಯ ಮೇಲೆ ಕಿರೀಟದಂತೆ ಪುಕ್ಕವಿರುತ್ತದೆ. ಬೆನ್ನ ಮೇಲೆ ಚಿಕ್ಕಚಿಕ್ಕ ಬಿಳಿ ಚುಕ್ಕಿಗಳಿವೆ. ರೆಕ್ಕೆಗಳಲ್ಲಿ ಅರ್ಧಚಂದ್ರಾಕಾರವಾಗಿರುವ ಬಿಳಿಯ ಪಟ್ಟೆ ಹಾರುವಾಗ ಎದ್ದು ಕಾಣುತ್ತದೆ. ಈ ಪುಕ್ಕದಲ್ಲಿ ಯೇ ಮಳೆಯ ನೀರನ್ನು ಹಿಡಿಟ್ಟುಕೊಂಡು ತನ್ನ ದಾಹವನ್ನು ಇಂಗಿಕೊಳ್ಳುತ್ತದೆ. ಹೀಗಾಗಿ ಮೇಲಿಂದ ಬೀಳುವ ಮಳೆಯ ನೀರೇ ಚಾತಕ ಪಕ್ಷಿಗೆ ಆಧಾರ. ನೀರಿಲ್ಲದೆ ಎಷ್ಟೋ ದಿನಗಳ ತನಕ ಬದುಕುವ ಶಕ್ತಿಯೂ ಚಾತಕಗಳಿಗೆ ಇವೆ ಎಂದು ನಂಬಲಾಗಿದೆ. ಅಲ್ಲದೆ ಕಾಣಿಸಿಕೊಂಡ ಭಾಗದಲ್ಲಿ ಖಂಡಿತ ಮಳೆಯಾಗುತ್ತದೆ ಎನ್ನುತ್ತದೆ ಜನಪದ. ಮಳೆ ಮುನ್ಸೂಚನೆ ಕೊಡುವುದರಿಂದ "ಮಾರುತಗಳ ಮುಂಗಾಮಿ" ಎನ್ನುತ್ತಾರೆ.
ಈ ಹಕ್ಕಿಯೂ ಆಫ್ರಿಕಾದಿಂದ ಭಾರತದತ್ತ ವಲಸೆ ಬರುತ್ತದೆ. ವಲಸೆ ಋತುವಿನಲ್ಲಿ ಈ ಹಕ್ಕಿ ಓಮನ್, ಸೌದಿ ಅರೇಬಿಯಾ, ಸೀಶೆಲ್ಸ್ ಗಳಿಗೆ ಭೇಟಿ ನೀಡಿ ಅರೇಬಿಯನ್ ಸಮುದ್ರ ಮತ್ತು ಹಿಂದೂ ಮಹಾಸಾಗರವನ್ನು ಹಾದು ಮೇ ಮತ್ತು ಜೂನ್ ನಲ್ಲಿ ಭಾರತಕ್ಕೆ ಆಗಮಿಸುತ್ತವೆ. ಕೋಗಿಲೆಗಳಂತೆ ಇವು ಸಹ ಬೇರೆ ಪಕ್ಷಿಯ ಗೂಡಿನಲ್ಲಿ ಮೊಟ್ಟೆಯನ್ನು ಇಟ್ಟು ಮರಿಮಾಡುತ್ತದೆ. ಜೂನ್ ಮತ್ತು ಆಗಸ್ಟ್ನಲ್ಲಿ ಸಂತಾನೋತ್ಪತ್ತಿ ನಡೆಸಿ, ಸೆಪ್ಟಂಬರ್- ಅಕ್ಟೋಬರ್ ವೇಳೆಗೆ ಭಾರತವನ್ನು ಬಿಡುತ್ತವೆ. ಕೆಲವೊಮ್ಮೆ ಮುಂಗಾರು ಮಳೆಯ ಮಾರುತವನ್ನನುಸರಿಸಿ ವ್ಯತ್ಯಾಸವಾಗುತ್ತಾ ಹೋಗುತ್ತದೆ. ದಟ್ಟ ಪೊದೆಗಳಲ್ಲಿ ಎರಡು ಹಕ್ಕಿಗಳು ಒಂದನ್ನೊಂದು ಅಟ್ಟಾಡುತ್ತಾ ಪ್ಯೂ ಪೀ ಪ್ಯೂಪೀ ಎಂದು ಸದ್ದು ಮಾಡುತ್ತವೆ.
ಚಿತ್ರಕೃಪೆ: ಇಂಟರ್ ನೆಟ್