Tuesday, July 14, 2015

ಕೆಂಬೂತ Greater coucal or crow pheasant (Centropus sinensis)
ಎಷ್ಟೋ ಸಂದರ್ಭಗಳಲ್ಲಿ ತಾಯಿಯ ಪಾಲನೆಯಿಂದ ವಂಚಿತರಾದ ಮಕ್ಕಳನ್ನು ತಂದೆಯೇ ಪೋಷಿಸಿರುತ್ತಾನೆ. ತಂದೆಯ ಆರೈಕೆಯಲ್ಲೆ ಮಕ್ಕಳು ಬೆಳೆದು ದೊಡ್ಡದಾಗುತ್ತಾರೆ. ಇಂತದೆ ಹೋಲಿಕೆ ಕೆಂಬೂತದ ಜೀವನದಲ್ಲೂ ಇದೆ. ಕೆಲವು ಪ್ರಬೇಧದ ಕೆಂಬೂತದ ಹೆಣ್ಣು ಹಕ್ಕಿ ಮೊಟ್ಟೆ ಇಟ್ಟು ಕಾವು ಕೊಡಲು ಹಿಂಜರಿದಾಗ ಮರಿಗಳ ಪಾಲನೆಯಲ್ಲಿ ನಿರಾಸಕ್ತಿ ತೋರಿದಾಗ ಗಂಡು ಹಕ್ಕಿಯೇ ಮರಿಗಳ ಪಾಲನೆ ಮಾಡುತ್ತದೆ ಎಂದು ನಂಬಲಾಗಿದೆ. ದಾಂಪತ್ಯದಲ್ಲಿ ಸರಸ-ವಿರಸ ಮನುಷ್ಯರಿಂದ ಹಿಡಿದು ಪ್ರಾಣಿ ಪಕ್ಷಿಗಳಲ್ಲೂ ಇದ್ದೆ ಇದೆ. 
ಕೆಂಬೂತ ನಮ್ಮ ದೇಶದಲ್ಲಿ ಸಿಗುವ ಸಾಮಾನ್ಯ ಹಕ್ಕಿಗಳಲ್ಲಿ ಒಂದು. ಒಂಟಿಯಾಗಿ ಅಥವಾ ಜತೆಯಾಗಿ ಕುರುಚಲು ಗಿಡಗಳಲ್ಲಿ, ತೆರೆದ ಕಾಡುಗಳಲ್ಲಿ, ಪೊದೆಗಳಲ್ಲಿ, ಜನರು ವಾಸಿಸುವ ಪ್ರದೇಶಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಆದರೂ ತುಂಬ ಜನ ನೋಡಿರುವುದಿಲ್ಲ. ನವಿಲನ್ನು ನೋಡಿ ಕೆಂಬೂತ ಪುಕ್ಕ ಕೆದರಿಕೊಂಡ ಹಾಗೆ ಎಂಬ ಗಾದೆಯೂ ಇದೆ. ಉದ್ದ ಮತ್ತು ಅಗಲವಾದ ಬಾಲದ ಪುಕ್ಕಗಳ, ಕಾಗೆಗಿಂತ ಕೊಂಚ ದೊಡ್ಡದಾದ ಹಕ್ಕಿ. ಮೈಯೆಲ್ಲ ಕಪ್ಪು ಬಣ್ಣ, ರೆಕ್ಕೆಗಳು ಮಾತ್ರ ಇಟ್ಟಿಗೆಗೆಂಪು ಬಣ್ಣ, ಕಣ್ಣುಗಳು ದಾಳಿಂಬೆ ಕಾಳಿನಂತೆ ಕೆಂಪಗೆ ಹೊಳೆಯುತ್ತವೆ. ಬಾಲದ ಪುಕ್ಕಗಳು ಸಡಿಲವಾಗಿ ಕಳಚಿ ಬೀಳುವಂತೆ ತುಯ್ದುಡುತ್ತವೆ. ಕಾಲಲ್ಲಿ ಹಿಂದೆ ಒಂದು, ಮುಂದೆ ಮೂರು ಬೆರಳುಗಳಿವೆ.
ಗಂಡು ಹೆಣ್ಣುಗಳಲ್ಲಿ ವ್ಯತ್ಯಾಸವಿಲ್ಲ. ವಿವಿಧ ಪ್ರದೇಶದ ಕೆಂಬೂತದ ಕೂಗಿನಲ್ಲಿ ಭಿನ್ನತೆ ಇದೆ. ಹಿಮಾಲಯದ ಕೆಂಬೂತ ಆಕಾರದಲ್ಲಿ ಚಿಕ್ಕದು. ದಕ್ಷಿಣ ಭಾರತದ ಕೆಂಬೂತಗಳು ಆಕಾರದಲ್ಲಿ ದೊಡ್ಡದು. ದಕ್ಷಿಣ ಭಾರತದಲ್ಲಿರುವ ಹಕ್ಕಿ ಜೂನ್ನಿಂದ ಸೆಪ್ಟೆಂಬರ್ ತಿಂಗಳಲ್ಲಿ ಮರಿಮಾಡುತ್ತವೆ. ಕೆಂಬೂತ ಕೋಗಿಲೆ ಜಾತಿಗೆ ಸೇರಿದ್ದರೂ ಇದು ಪರವಾಲಂಬಿಯಲ್ಲ. ಬೇರೆ ಹಕ್ಕಿಗಳ ಗೂಡಲ್ಲಿ ಮೊಟ್ಟೆ ಇಡುವುದಿಲ್ಲ. ಗೂಡು ಕಟ್ಟಿ ಮರಿಮಾಡುವುದು. ಈ ಸಂದರ್ಭದಲ್ಲಿ ಒಂದನ್ನೊಂದು ಬೆನ್ನಟ್ಟಿ ಓಡುವುದು, ಗಂಡು ಹೆಣ್ಣಿಗೆ ಇಷ್ಟದ ಆಹಾರ ನೀಡುವ ಮೂಲಕ ಉಡುಗೋರೆ ನೀಡುತ್ತದೆ. ಹೀಗೆ ರತಿಕ್ರೀಡೆ ಆರಂಭಿಸುತ್ತದೆ. ಹೆಣ್ಣು ತನ್ನ ಬಾಲ ತಗ್ಗಿಸಿ ಗಂಡಿಗೆ ಸಮ್ಮತಿ ತೋರುವುದು. ಪ್ರಣಯದ ನಂತರ ಹೆಣ್ಣು 3-5 ಮೊಟ್ಟೆ ಇಡುತ್ತದೆ. ಗಂಡು ಹೆಣ್ಣು ಸೇರಿ ಗೂಡು ಕಟ್ಟುತ್ತದೆ. ಮೊಟ್ಟೆಗೆ ಕಾವು ಕೊಡುವುದು, ಮರಿಗಳಿಗೆ ಗುಟುಕು ನೀಡುತ್ತದೆ. ಆದರೂ ಮರಿಗಳ ರಕ್ಷಣೆಯಲ್ಲಿ ಗಂಡಿನ ಪಾತ್ರ ಹೆಚ್ಚು. ಇವು ಏಕಪತ್ನಿ ಸ್ವೀಕರಿಸಿ ಜೀವನ ಪೂರ್ತಿ ಒಟ್ಟಿಗೆ ಇರುವುವು ಎಂದು ನಂಬಲಾಗಿದೆ.
ಕನ್ನಡದಲ್ಲಿ ಕುಪ್ಪುಳಕ್ಕಿ, ಕೆಂಬತ್ತು, ಭಾರದ್ವಾಜ ಹಕ್ಕಿ ಎಂದೂ ಕರೆಯಲ್ಪಡುವ ಕೆಂಬೂತ ತನ್ನ ಕೂಗು, ವರ್ತನೆಗಳಿಂದ ಅನೇಕ ಸಂಸ್ಕೃತಿಗಳಲ್ಲಿ ಶಕುನ ಸೂಚಕ ಎಂದು ಪರಿಗಣಿಸಲಾಗಿದೆ. ಬೂಕ್… ಬೂಕ್… ಎಂಬ ಆಳವಾದ ಧ್ವನಿಯಿಂದ ಇವು ಕೂಗುತ್ತವೆ. ಈ ಕೂಗು ಶಂಕನಾದವನ್ನು ಹೋಲುವುದರಿಂದ ಈ ಹಕ್ಕಿಯನ್ನು ಶುಭಕರವೆಂದು ನಂಬಲಾಗಿದೆ. ಈ ಹಕ್ಕಿಗೆ ಸಂಜೀವಿನೀ ವನಸ್ಪತಿ ತಿಳಿದಿದೆ ಎಂದು ನಂಬಿದ್ದಾರೆ. ರಾಮಾಯಣದಲ್ಲಿ ಆಂಜನೇಯನು ಸಂಜೀವಿನ ವನಸ್ಪತಿಯಿಂದ ಲಕ್ಷ್ಮಣನನ್ನು ಬದುಕಿಸಿದನಂತೆ. ಹಾಗಾಗಿ ಕೆಂಬೂತದ ಗೂಡು ಮರಿ ಇರುವ ಜಾಗದಲ್ಲಿ ಬೆಂಕಿ ಹಾಕಿ , ಸುಡಲು ಪ್ರಯತ್ನಿಸಿದಾಗ ತನ್ನ ಮರಿ ರಕ್ಷಣೆಗೆ ಕೆಂಬೂತಗಳು ಸಂಜೀವಿನಿ ಕಟ್ಟಿ ತರುತ್ತವೆ. ಅದನ್ನು ತಾವು ಪಡೆದು ಸತ್ತವರನ್ನು ಬದುಕಿಸ ಬಹುದು ಎಂದು ನಂಬಿದ್ದಾರೆ. ಇದು ಸತ್ಯವೋ ಸುಳ್ಳೋ ತಿಳಿದಿಲ್ಲ. ಹೀಗೆ ಮಾಡುವುದರಿಂದ ಈ ಅಪೂರ್ವ ಹಕ್ಕಿಯ ನಾಶಕ್ಕೆ ಮಾನವ ಕಾರಣನಾಗುತ್ತಾನೆ.
ಹಳ್ಳಿಗಳಲ್ಲಿ ಇವನ್ನು ಕೆಂಬುಕ್ತಿ ಅಂತಾರೆ. ನಾವು ಹಳ್ಳಿಯಲ್ಲಿ ದನ ಮೇಯಿಸಲು ಹೋಗುತ್ತಿದ್ದಾಗ ಗುತ್ತಿಯಲ್ಲಿ ಕುಳಿತಿರುತ್ತಿದ್ದ ಕೆಂಬೂತ ನಮ್ಮ ಹೆಜ್ಜೆಯ ಸಪ್ಪಳಕ್ಕೆ ಬರ್ ಎಂದು ಹಾರುವ ಮೂಲಕ ಒಂದು ಕ್ಷಣ ಹೆದರಿಸುತ್ತಿತ್ತು. ಬೇರೆ ಪಕ್ಷಿಗಳ ಗೂಡಿನಲ್ಲಿ ಮೊಟ್ಟೆ ಕದಿಯುವುದರಿಂದ ಇದನ್ನು ಕಂಡರೆ ಹಲವರಿಗೆ ಕೋಪ ಮತ್ತು ತಾತ್ಸರ.
(ಕೆಳಗಿನ ಪ್ಯಾರ ಪೂರ್ಣ ಚಂದ್ರತೇಜಸ್ವಿ ಅವರ ಮಿಂಚುಳ್ಳಿ ಪುಸ್ತಕದಿಂದ ತೆಗೆದುಕೊಂಡಿರುವುದು)
ಕೆಂಬೂತ ನವಿಲಿನಂತೆ ಪುಕ್ಕ ಬಿಚ್ಚಿಕೊಂಡು ನರ್ತಿಸುವುದಿಲ್ಲವಾದರೂ ಸಡಿಲವಾಗಿ ಸಿಕ್ಕಿಸಿದಂತಿರುವ ಪುಕ್ಕಗಳನ್ನೂ ಬಾಲದ ಗರಿಗಳನ್ನೂ ಒಮ್ಮೊಮ್ಮೆ ಬಿಚ್ಚಿಕೊಂಡು ಕೊರ್ರ್ ಎಂದು ಕೆಂಬೂತ ಸದ್ದು ಮಾಡುವುದು ನಿಜ. ಹಾವುಗಳನ್ನೂ ಓತಿಕ್ಯಾತಗಳನ್ನೂ ಹಿಡಿಯಬೇಕಾದಾಗ ಅವುಗಳೆದುರು ಪುಕ್ಕ ಬಿಚ್ಚಿಕೊಂಡು ಸದ್ದು ಮಾಡಿ ಹೆದರಿಸಿಲು ಹೀಗೆ ಮಾಡುತ್ತದೆ.
ಚಿತ್ರ-ಇಂಟರ್ ನೆಟ್ ಸಹಾಯ

No comments:

Post a Comment