Thursday, August 27, 2015

ಚಾತಕ ಪಕ್ಷಿ, ಚೊಟ್ಟಿ ಕೋಗಿಲೆ
Pied crested cuckoo (Clamator jacobinus) 
ಪ್ರಿಯೆ ನಿನಗಾಗಿ ನಾನು ಚಾತಕ ಪಕ್ಷಿಯಂತೆ ಕಾಯುತ್ತಿದ್ದೇನೆ…ಎಂದು ಹುಡುಗ ತನ್ನ ಹುಡುಗಿಗೆ ಹೇಳುವುದುಂಟು. ಅದುಮನುಷ್ಯರ ಲೋಕದಲ್ಲಿ. ಆದರೆ ಒಂದು ಜಾತಿಯ ಪಕ್ಷಿಯೂ ಮಳೆ ಹನಿಗಾಗಿ ನಿರಂತರವಾಗಿ ಕಾಯುತ್ತಿರುತ್ತದೆ. ಚಾತಕ ಎಂದರೆ ಸಂಸ್ಕೃತದಲ್ಲಿ ಕಾಯುವುದು ಎಂದರ್ಥ. ಮಳೆಗಾಗಿ ಈ ಹಕ್ಕಿಯೂ ಕಾಯುವುದರಿಂದ ಚಾತಕ ಪಕ್ಷಿ ಎಂದು ಹೆಸರು ಬಂದಿದೆ.
ಚೊಟ್ಟಿ ಕೋಗಿಲೆ, ಚಾತಕ ಪಕ್ಷಿಗೆ ಇಂಗ್ಲೀಷ್ನಲ್ಲಿ ಪಯ್ಡ್ ಕುಕ್ಕೂ ಅಥವಾ ಜಾಕೊಬಿನ್ ಕುಕ್ಕೂ ಎಂದು ಕರೆಯುತ್ತಾರೆ. ಅಲ್ಲದೆ ಪಪೀಹಾ, ಕರಿ ಜುಟ್ಟು, ಗಲಾಟೆ ಕೋಗಿಲೆ ಅಂತಲೂ ಹೇಳುತ್ತಾರೆ. ಮಳೆಗೂ ಚಾತಕಪಕ್ಷಿಗೂ ಅವಿನಾಭಾವ ಸಂಬಂಧ. ಮಳೆಗಾಲದ ಆಗಮನವನ್ನು ಸಾರುವ ಅಂದರೆ ಮಳೆ ಮುನ್ಸೂಚನೆ ಕೊಡುವ ಈ ಹಕ್ಕಿ ಹೆಚ್ಚಾಗಿ ಮಳೆ ನೀರನ್ನು ಕುಡಿದು ಜೀವಿಸುತ್ತದೆ ಎಂದು ನಂಬಿದ್ದಾರೆ. ಜಾನಪದದಿಂದ ಹಿಡಿದು ಪುರಾಣಗಳಲ್ಲೂ ಈ ಹಕ್ಕಿ ತನ್ನದೆ ಆದ ವಿಶೇಷ ಸ್ಥಾನ ಪಡೆದುಕೊಂಡಿದೆ ಮಹಾಕವಿ ಕಾಳಿದಾಸನೂ ಮೇಘದೂತ ಕಾವ್ಯದಲ್ಲಿಯೂ ಈ ಹಕ್ಕಿಯ ಬಗ್ಗೆ ವರ್ಣಿಸಿದ್ದಾನೆ.
ಕೋಗಿಲೆ ಜಾತಿಯದ್ದೆ ಆದ್ದರಿಂದ ಮೈ ಬಣ್ಣ ಕೋಗಿಲೆಯಂತೆಯೇ ಕಪ್ಪು ಉದ್ದ ಬಾಲದ ಮೈನಾ ಹಕ್ಕಿಗಾತ್ರದ ಹಕ್ಕಿ. ಕತ್ತಿನ ಕೆಳಭಾಗದಲ್ಲಿ ಬಿಳಿ ಮತ್ತು ಹಳದಿ ಬಣ್ಣದ ಮಿಶ್ರಣವಿದೆ. ತಲೆಯ ಮೇಲೆ ಕಿರೀಟದಂತೆ ಪುಕ್ಕವಿರುತ್ತದೆ. ಬೆನ್ನ ಮೇಲೆ ಚಿಕ್ಕಚಿಕ್ಕ ಬಿಳಿ ಚುಕ್ಕಿಗಳಿವೆ. ರೆಕ್ಕೆಗಳಲ್ಲಿ ಅರ್ಧಚಂದ್ರಾಕಾರವಾಗಿರುವ ಬಿಳಿಯ ಪಟ್ಟೆ ಹಾರುವಾಗ ಎದ್ದು ಕಾಣುತ್ತದೆ. ಈ ಪುಕ್ಕದಲ್ಲಿ ಯೇ ಮಳೆಯ ನೀರನ್ನು ಹಿಡಿಟ್ಟುಕೊಂಡು ತನ್ನ ದಾಹವನ್ನು ಇಂಗಿಕೊಳ್ಳುತ್ತದೆ. ಹೀಗಾಗಿ ಮೇಲಿಂದ ಬೀಳುವ ಮಳೆಯ ನೀರೇ ಚಾತಕ ಪಕ್ಷಿಗೆ ಆಧಾರ. ನೀರಿಲ್ಲದೆ ಎಷ್ಟೋ ದಿನಗಳ ತನಕ ಬದುಕುವ ಶಕ್ತಿಯೂ ಚಾತಕಗಳಿಗೆ ಇವೆ ಎಂದು ನಂಬಲಾಗಿದೆ. ಅಲ್ಲದೆ ಕಾಣಿಸಿಕೊಂಡ ಭಾಗದಲ್ಲಿ ಖಂಡಿತ ಮಳೆಯಾಗುತ್ತದೆ ಎನ್ನುತ್ತದೆ ಜನಪದ. ಮಳೆ ಮುನ್ಸೂಚನೆ ಕೊಡುವುದರಿಂದ "ಮಾರುತಗಳ ಮುಂಗಾಮಿ" ಎನ್ನುತ್ತಾರೆ.
ಈ ಹಕ್ಕಿಯೂ ಆಫ್ರಿಕಾದಿಂದ ಭಾರತದತ್ತ ವಲಸೆ ಬರುತ್ತದೆ. ವಲಸೆ ಋತುವಿನಲ್ಲಿ ಈ ಹಕ್ಕಿ ಓಮನ್, ಸೌದಿ ಅರೇಬಿಯಾ, ಸೀಶೆಲ್ಸ್ ಗಳಿಗೆ ಭೇಟಿ ನೀಡಿ ಅರೇಬಿಯನ್ ಸಮುದ್ರ ಮತ್ತು ಹಿಂದೂ ಮಹಾಸಾಗರವನ್ನು ಹಾದು ಮೇ ಮತ್ತು ಜೂನ್ ನಲ್ಲಿ ಭಾರತಕ್ಕೆ ಆಗಮಿಸುತ್ತವೆ. ಕೋಗಿಲೆಗಳಂತೆ ಇವು ಸಹ ಬೇರೆ ಪಕ್ಷಿಯ ಗೂಡಿನಲ್ಲಿ ಮೊಟ್ಟೆಯನ್ನು ಇಟ್ಟು ಮರಿಮಾಡುತ್ತದೆ. ಜೂನ್ ಮತ್ತು ಆಗಸ್ಟ್ನಲ್ಲಿ ಸಂತಾನೋತ್ಪತ್ತಿ ನಡೆಸಿ, ಸೆಪ್ಟಂಬರ್- ಅಕ್ಟೋಬರ್ ವೇಳೆಗೆ ಭಾರತವನ್ನು ಬಿಡುತ್ತವೆ. ಕೆಲವೊಮ್ಮೆ ಮುಂಗಾರು ಮಳೆಯ ಮಾರುತವನ್ನನುಸರಿಸಿ ವ್ಯತ್ಯಾಸವಾಗುತ್ತಾ ಹೋಗುತ್ತದೆ. ದಟ್ಟ ಪೊದೆಗಳಲ್ಲಿ ಎರಡು ಹಕ್ಕಿಗಳು ಒಂದನ್ನೊಂದು ಅಟ್ಟಾಡುತ್ತಾ ಪ್ಯೂ ಪೀ ಪ್ಯೂಪೀ ಎಂದು ಸದ್ದು ಮಾಡುತ್ತವೆ.
ಚಿತ್ರಕೃಪೆ: ಇಂಟರ್ ನೆಟ್

Thursday, July 23, 2015

ಬೆಳ್ಗಣ್ಣ (ಮಲ್ಲಿಕಾಕ್ಷ)  Oriental_White-eye(Zosterops palpebrosus)
ಮನುಷ್ಯರಾದ ನಾವೆಲ್ಲ ಒಬ್ಬರಿಗೊಬ್ಬರು ಸಂಪರ್ಕಿದಲ್ಲಿ ಇರಲು, ಫೋನ್, ಸೆಲ್ ಫೋನ್, ಇಂಟರ್ ನೆಟ್ ಹೀಗೆ ಹಲವಾರು ಸಂಪರ್ಕ ಸಾಧನಗಳನ್ನು ಬಳಸುತ್ತಿದ್ದೇವೆ. ಆದರೆ ಈ ಹಕ್ಕಿಗಳು ಮನುಷ್ಯನಿಗಿಂತ ಏನು ಕಡಿಮೆಯಿಲ್ಲ.   ಗುಬ್ಬಚಿ ಗಾತ್ರ ಬೆಳ್ಗಣ್ಣ ಹಕ್ಕಿಗಳು ಗುಂಪಿನಿಂದ ಬೇರ್ಪಟ್ಟಿದ್ದರೂ ಆಹಾರ ಸೇವನೆಯ ಸಮಯದಲ್ಲಿ ಮಾತ್ರ ಹಗುರ ಚಿಲಿಪಿಲಿ ಕರೆಗಳ ಮೂಲಕ ಒಂದಕ್ಕೊಂದು ಗುಂಪಿನೊಂದಿಗೆ ಸಂಪರ್ಕದಲ್ಲಿರುತ್ತವೆ ಆದರೆ ಮಾತು ಬಾರದ ಪಕ್ಷಿಗಳೇನು ಮನುಷ್ಯರಿಗಿಂತ ಹಿಂದೆ ಬಿದ್ದಿಲ್ಲ ಎನ್ನಬಹುದು.
ಭಾರತ-ಉಪಖಂಡದಕ್ಷಿಣ ಏಷ್ಯಾಇಂಡೋನೇಷ್ಯಾಮಲೇಷ್ಯಾದಲ್ಲಿ ಕಾಣಿಸುವ ಈ ಹಕ್ಕಿಯು ಹಸಿರು ಮಿಶ್ರಿತ ಹಳದಿ ಪಕ್ಷಿ. ಕೊಕ್ಕು ಮತ್ತು ಕಾಲುಗಳು ಕಪ್ಪು ಬಣ್ಣಕ್ಕೆ ಇರುತ್ತವೆ. ಕಣ್ಣಿನ ಸುತ್ತಲು ಬಿಳಿ ಉಂಗುರದ ಆಕೃತಿ ಇರುವ ಕಾರಣ ಈ ಹಕ್ಕಿಗೆ ಬೆಳ್ಗಣ್ಣ (ಮಲ್ಲಿಕಾಕ್ಷ) ಎಂದು ಹೆಸರು ಬಂದಿದೆ. ಹೆಣ್ಣು ಗಂಡುಗಳಲ್ಲಿ ವ್ಯತ್ಯಾಸವಿಲ್ಲ. ಸಾಮಾನ್ಯವಾಗಿ ಕುರುಚಲು ಕಾಡು, ತೋಟಗಳಲ್ಲಿ ಮರ ಮತ್ತು ಪೊದೆಗಳ ನಡುವೆ ಇಂಪಾಗಿ ಹಾಡಿಕೊಂಡು ಕಾಲ ಕಳೆಯತ್ತದೆ. ಹೂವಿನ ಮಕರಂದಚಿಕ್ಕ ಕೀಟಗಳು ಮತ್ತು ಚಿಕ್ಕ ಹಣ್ಣುಗಳನ್ನು ಆಹಾರವಾಗಿ ಸೇವಿಸುತ್ತವೆನಾರು, ಜೇಡರ ಬಲೆಗಳಿಂದ ಕೂಡಿದ ತೊಟ್ಟಲಿನಕಾರದ ಗೂಡನ್ನು ಕಟ್ಟಿ, ಏಪ್ರಿಲ್- ಜುಲೈನಲ್ಲಿ ಸಂತಾನಭಿವೃದ್ಧಿಯಲ್ಲಿ ತೊಡಗುತ್ತದೆ. ಚಿಕ್ಕ ಗುಂಪುಗಳಲ್ಲಿ ಇರುವ ಇವು ಸಂತಾನ ಅಭಿವೃದ್ಧಿ ಸಮಯದಲ್ಲಷ್ಟೇ ತಾತ್ಕಾಲಿಕವಾಗಿ ಬೇರೆಯಾಗುತ್ತವೆ. ಮೊಟ್ಟೆಗಳು 10 ದಿನಗಳಲ್ಲಿ ಮರಿಗಳಾಗುತ್ತವೆತಂದೆ ಮತ್ತು ತಾಯಿ ಎರಡೂ ಹಕ್ಕಿಗಳು ಮರಿಗಳ ಪಾಲನೆ ಪೋಷಣೆಯಲ್ಲಿ ತೊಡಗುತ್ತವೆ.
ಈ ಹಕ್ಕಿ ಗಾತ್ರದಲ್ಲಿ ಸಣ್ಣದಾದರೂ ಹಲವು ವಿಶೇಷತೆಗಳನ್ನು ಹೊಂದಿದೆ. ಮಕರಂದ ಸೇವನೆಯ ಸಮಯದಲ್ಲಿ ಇವು ಪರಾಗಸ್ಪರ್ಶ ಕ್ರಿಯೆಗೆ ಕಾರಣವಾಗುತ್ತವೆ. ಪರಪಕ್ಷಿಗಳ ಮರಿಗಳಿಗೂಆಹಾರ ಉಣಿಸುವುದು ಕೆಲವರು ಕಂಡಿದ್ದಾರೆ. ಇವು ನೆಲಕ್ಕಿಳಿಯುವುದು ಬಹಳ ವಿರಳಮರ ಗಿಡಗಳ ಮೇಲೆ ಎಲೆಮರೆಗಳಲ್ಲಿ ಕಾಲಕಳೆಯುತ್ತವೆಮನೆ ಕಟ್ಟಲು ಮುಂದೆ ಮರಳು ಹಾಕಿಸಿದ್ದರೆ ಕಳ್ಳರು ಅದನ್ನೆ ಕದಿಯುವಂತೆ ಈ ಹಕ್ಕಿ ಬೇರೆ ಪಕ್ಷಿಗಳ ಗೂಡಿನಿಂದ ಗೂಡು ಕಟ್ಟುವ ವಸ್ತುಗಳನ್ನು ಕದಿಯುವುದುಂಟು.

(ಕೆಳಗಿನ ಪ್ಯಾರವು ಪೂರ್ಣಚಂದ್ರ ತೇಜಸ್ವಿ ಅವರ ಮಿಂಚುಳ್ಳಿ ಪುಸ್ತಕದಿಂದ ಹೆಕ್ಕಿದ್ದು) 

ಬಿಳಿ ಕಣ್ಣು ಅದರ ಪ್ರಧಾನ ಲಕ್ಷಣಗಳಲ್ಲಿ ಒಂದಾದ್ದರಿಂದ ನಾನು ಆ ವಿಶೇಷಣ ಸೇರಿಸಿದ್ದೇನಷ್ಟೆ. ಮೈ ಮೇಲೆ ತಿಳಿ ಹಸುರು ಬಣ್ಣ ಮತ್ತು ಎದೆ ಹಳದಿ ಬಣ್ಣವಿರುವ ಈ ಹಕ್ಕಿ ನೋಡಲು ಬಣ್ಣದ ಹತ್ತಿಯನ್ನು ಹಿಂಜಿಟ್ಟಂತೆ ಅತಿ ನವುರಾಗಿ ಕಾಣುತ್ತದೆ. ಇವು ಹತ್ತು ಹದಿನೈದರ ಗುಂಪುಗಳಲ್ಲಿ ಅವುಗಳ ಆಕೃತಿಯಷ್ಟೆ ನವುರಾಗಿ ‘ಚಿರೀಮ್’ ಎಂದು ಮೆಲ್ಲುಲಿಯಲ್ಲಿ ಹಾಡಿಕೊಳ್ಳುತ್ತಾ ಗಿಡಮರಗಳೆಯಲ್ಲಿ ಹಾರಾಡುತ್ತವೆ. ಈ ಹಕ್ಕಿಯ ಕಣ್ಣಿನ ಸುತ್ತ ಬಿಳಿಯ ಫ್ರೇಮಿನ ಕನ್ನಡಕ ಹಾಕಿದಂತೆ ಒಂದು ಉಂಗುರ ಇರುವುದರಿಂದ ಇದನ್ನು ಗುರುತಿಸುವುದು ಕಷ್ಟವೇನಲ್ಲ. ಆದರೂ ಈ ಹಕ್ಕಿಗಳು ಒಂದು ಬಗೆಯ ವಿಚಿತ್ರ ಲಾಲಿತ್ಯದಲ್ಲಿ ಮರಗಳೆಡೆ ಹಾರಾಡುವುದರಿಂದ ಇವು ಕಣ್ಣಿಗೆ ಬೀಳುವುದಕ್ಕೆ ಮೊದಲೇ ಕಿವಿಗೆ ಬೀಳುತ್ತವೆ.

Tuesday, July 14, 2015

ಕೆಂಬೂತ Greater coucal or crow pheasant (Centropus sinensis)
ಎಷ್ಟೋ ಸಂದರ್ಭಗಳಲ್ಲಿ ತಾಯಿಯ ಪಾಲನೆಯಿಂದ ವಂಚಿತರಾದ ಮಕ್ಕಳನ್ನು ತಂದೆಯೇ ಪೋಷಿಸಿರುತ್ತಾನೆ. ತಂದೆಯ ಆರೈಕೆಯಲ್ಲೆ ಮಕ್ಕಳು ಬೆಳೆದು ದೊಡ್ಡದಾಗುತ್ತಾರೆ. ಇಂತದೆ ಹೋಲಿಕೆ ಕೆಂಬೂತದ ಜೀವನದಲ್ಲೂ ಇದೆ. ಕೆಲವು ಪ್ರಬೇಧದ ಕೆಂಬೂತದ ಹೆಣ್ಣು ಹಕ್ಕಿ ಮೊಟ್ಟೆ ಇಟ್ಟು ಕಾವು ಕೊಡಲು ಹಿಂಜರಿದಾಗ ಮರಿಗಳ ಪಾಲನೆಯಲ್ಲಿ ನಿರಾಸಕ್ತಿ ತೋರಿದಾಗ ಗಂಡು ಹಕ್ಕಿಯೇ ಮರಿಗಳ ಪಾಲನೆ ಮಾಡುತ್ತದೆ ಎಂದು ನಂಬಲಾಗಿದೆ. ದಾಂಪತ್ಯದಲ್ಲಿ ಸರಸ-ವಿರಸ ಮನುಷ್ಯರಿಂದ ಹಿಡಿದು ಪ್ರಾಣಿ ಪಕ್ಷಿಗಳಲ್ಲೂ ಇದ್ದೆ ಇದೆ. 
ಕೆಂಬೂತ ನಮ್ಮ ದೇಶದಲ್ಲಿ ಸಿಗುವ ಸಾಮಾನ್ಯ ಹಕ್ಕಿಗಳಲ್ಲಿ ಒಂದು. ಒಂಟಿಯಾಗಿ ಅಥವಾ ಜತೆಯಾಗಿ ಕುರುಚಲು ಗಿಡಗಳಲ್ಲಿ, ತೆರೆದ ಕಾಡುಗಳಲ್ಲಿ, ಪೊದೆಗಳಲ್ಲಿ, ಜನರು ವಾಸಿಸುವ ಪ್ರದೇಶಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಆದರೂ ತುಂಬ ಜನ ನೋಡಿರುವುದಿಲ್ಲ. ನವಿಲನ್ನು ನೋಡಿ ಕೆಂಬೂತ ಪುಕ್ಕ ಕೆದರಿಕೊಂಡ ಹಾಗೆ ಎಂಬ ಗಾದೆಯೂ ಇದೆ. ಉದ್ದ ಮತ್ತು ಅಗಲವಾದ ಬಾಲದ ಪುಕ್ಕಗಳ, ಕಾಗೆಗಿಂತ ಕೊಂಚ ದೊಡ್ಡದಾದ ಹಕ್ಕಿ. ಮೈಯೆಲ್ಲ ಕಪ್ಪು ಬಣ್ಣ, ರೆಕ್ಕೆಗಳು ಮಾತ್ರ ಇಟ್ಟಿಗೆಗೆಂಪು ಬಣ್ಣ, ಕಣ್ಣುಗಳು ದಾಳಿಂಬೆ ಕಾಳಿನಂತೆ ಕೆಂಪಗೆ ಹೊಳೆಯುತ್ತವೆ. ಬಾಲದ ಪುಕ್ಕಗಳು ಸಡಿಲವಾಗಿ ಕಳಚಿ ಬೀಳುವಂತೆ ತುಯ್ದುಡುತ್ತವೆ. ಕಾಲಲ್ಲಿ ಹಿಂದೆ ಒಂದು, ಮುಂದೆ ಮೂರು ಬೆರಳುಗಳಿವೆ.
ಗಂಡು ಹೆಣ್ಣುಗಳಲ್ಲಿ ವ್ಯತ್ಯಾಸವಿಲ್ಲ. ವಿವಿಧ ಪ್ರದೇಶದ ಕೆಂಬೂತದ ಕೂಗಿನಲ್ಲಿ ಭಿನ್ನತೆ ಇದೆ. ಹಿಮಾಲಯದ ಕೆಂಬೂತ ಆಕಾರದಲ್ಲಿ ಚಿಕ್ಕದು. ದಕ್ಷಿಣ ಭಾರತದ ಕೆಂಬೂತಗಳು ಆಕಾರದಲ್ಲಿ ದೊಡ್ಡದು. ದಕ್ಷಿಣ ಭಾರತದಲ್ಲಿರುವ ಹಕ್ಕಿ ಜೂನ್ನಿಂದ ಸೆಪ್ಟೆಂಬರ್ ತಿಂಗಳಲ್ಲಿ ಮರಿಮಾಡುತ್ತವೆ. ಕೆಂಬೂತ ಕೋಗಿಲೆ ಜಾತಿಗೆ ಸೇರಿದ್ದರೂ ಇದು ಪರವಾಲಂಬಿಯಲ್ಲ. ಬೇರೆ ಹಕ್ಕಿಗಳ ಗೂಡಲ್ಲಿ ಮೊಟ್ಟೆ ಇಡುವುದಿಲ್ಲ. ಗೂಡು ಕಟ್ಟಿ ಮರಿಮಾಡುವುದು. ಈ ಸಂದರ್ಭದಲ್ಲಿ ಒಂದನ್ನೊಂದು ಬೆನ್ನಟ್ಟಿ ಓಡುವುದು, ಗಂಡು ಹೆಣ್ಣಿಗೆ ಇಷ್ಟದ ಆಹಾರ ನೀಡುವ ಮೂಲಕ ಉಡುಗೋರೆ ನೀಡುತ್ತದೆ. ಹೀಗೆ ರತಿಕ್ರೀಡೆ ಆರಂಭಿಸುತ್ತದೆ. ಹೆಣ್ಣು ತನ್ನ ಬಾಲ ತಗ್ಗಿಸಿ ಗಂಡಿಗೆ ಸಮ್ಮತಿ ತೋರುವುದು. ಪ್ರಣಯದ ನಂತರ ಹೆಣ್ಣು 3-5 ಮೊಟ್ಟೆ ಇಡುತ್ತದೆ. ಗಂಡು ಹೆಣ್ಣು ಸೇರಿ ಗೂಡು ಕಟ್ಟುತ್ತದೆ. ಮೊಟ್ಟೆಗೆ ಕಾವು ಕೊಡುವುದು, ಮರಿಗಳಿಗೆ ಗುಟುಕು ನೀಡುತ್ತದೆ. ಆದರೂ ಮರಿಗಳ ರಕ್ಷಣೆಯಲ್ಲಿ ಗಂಡಿನ ಪಾತ್ರ ಹೆಚ್ಚು. ಇವು ಏಕಪತ್ನಿ ಸ್ವೀಕರಿಸಿ ಜೀವನ ಪೂರ್ತಿ ಒಟ್ಟಿಗೆ ಇರುವುವು ಎಂದು ನಂಬಲಾಗಿದೆ.
ಕನ್ನಡದಲ್ಲಿ ಕುಪ್ಪುಳಕ್ಕಿ, ಕೆಂಬತ್ತು, ಭಾರದ್ವಾಜ ಹಕ್ಕಿ ಎಂದೂ ಕರೆಯಲ್ಪಡುವ ಕೆಂಬೂತ ತನ್ನ ಕೂಗು, ವರ್ತನೆಗಳಿಂದ ಅನೇಕ ಸಂಸ್ಕೃತಿಗಳಲ್ಲಿ ಶಕುನ ಸೂಚಕ ಎಂದು ಪರಿಗಣಿಸಲಾಗಿದೆ. ಬೂಕ್… ಬೂಕ್… ಎಂಬ ಆಳವಾದ ಧ್ವನಿಯಿಂದ ಇವು ಕೂಗುತ್ತವೆ. ಈ ಕೂಗು ಶಂಕನಾದವನ್ನು ಹೋಲುವುದರಿಂದ ಈ ಹಕ್ಕಿಯನ್ನು ಶುಭಕರವೆಂದು ನಂಬಲಾಗಿದೆ. ಈ ಹಕ್ಕಿಗೆ ಸಂಜೀವಿನೀ ವನಸ್ಪತಿ ತಿಳಿದಿದೆ ಎಂದು ನಂಬಿದ್ದಾರೆ. ರಾಮಾಯಣದಲ್ಲಿ ಆಂಜನೇಯನು ಸಂಜೀವಿನ ವನಸ್ಪತಿಯಿಂದ ಲಕ್ಷ್ಮಣನನ್ನು ಬದುಕಿಸಿದನಂತೆ. ಹಾಗಾಗಿ ಕೆಂಬೂತದ ಗೂಡು ಮರಿ ಇರುವ ಜಾಗದಲ್ಲಿ ಬೆಂಕಿ ಹಾಕಿ , ಸುಡಲು ಪ್ರಯತ್ನಿಸಿದಾಗ ತನ್ನ ಮರಿ ರಕ್ಷಣೆಗೆ ಕೆಂಬೂತಗಳು ಸಂಜೀವಿನಿ ಕಟ್ಟಿ ತರುತ್ತವೆ. ಅದನ್ನು ತಾವು ಪಡೆದು ಸತ್ತವರನ್ನು ಬದುಕಿಸ ಬಹುದು ಎಂದು ನಂಬಿದ್ದಾರೆ. ಇದು ಸತ್ಯವೋ ಸುಳ್ಳೋ ತಿಳಿದಿಲ್ಲ. ಹೀಗೆ ಮಾಡುವುದರಿಂದ ಈ ಅಪೂರ್ವ ಹಕ್ಕಿಯ ನಾಶಕ್ಕೆ ಮಾನವ ಕಾರಣನಾಗುತ್ತಾನೆ.
ಹಳ್ಳಿಗಳಲ್ಲಿ ಇವನ್ನು ಕೆಂಬುಕ್ತಿ ಅಂತಾರೆ. ನಾವು ಹಳ್ಳಿಯಲ್ಲಿ ದನ ಮೇಯಿಸಲು ಹೋಗುತ್ತಿದ್ದಾಗ ಗುತ್ತಿಯಲ್ಲಿ ಕುಳಿತಿರುತ್ತಿದ್ದ ಕೆಂಬೂತ ನಮ್ಮ ಹೆಜ್ಜೆಯ ಸಪ್ಪಳಕ್ಕೆ ಬರ್ ಎಂದು ಹಾರುವ ಮೂಲಕ ಒಂದು ಕ್ಷಣ ಹೆದರಿಸುತ್ತಿತ್ತು. ಬೇರೆ ಪಕ್ಷಿಗಳ ಗೂಡಿನಲ್ಲಿ ಮೊಟ್ಟೆ ಕದಿಯುವುದರಿಂದ ಇದನ್ನು ಕಂಡರೆ ಹಲವರಿಗೆ ಕೋಪ ಮತ್ತು ತಾತ್ಸರ.
(ಕೆಳಗಿನ ಪ್ಯಾರ ಪೂರ್ಣ ಚಂದ್ರತೇಜಸ್ವಿ ಅವರ ಮಿಂಚುಳ್ಳಿ ಪುಸ್ತಕದಿಂದ ತೆಗೆದುಕೊಂಡಿರುವುದು)
ಕೆಂಬೂತ ನವಿಲಿನಂತೆ ಪುಕ್ಕ ಬಿಚ್ಚಿಕೊಂಡು ನರ್ತಿಸುವುದಿಲ್ಲವಾದರೂ ಸಡಿಲವಾಗಿ ಸಿಕ್ಕಿಸಿದಂತಿರುವ ಪುಕ್ಕಗಳನ್ನೂ ಬಾಲದ ಗರಿಗಳನ್ನೂ ಒಮ್ಮೊಮ್ಮೆ ಬಿಚ್ಚಿಕೊಂಡು ಕೊರ್ರ್ ಎಂದು ಕೆಂಬೂತ ಸದ್ದು ಮಾಡುವುದು ನಿಜ. ಹಾವುಗಳನ್ನೂ ಓತಿಕ್ಯಾತಗಳನ್ನೂ ಹಿಡಿಯಬೇಕಾದಾಗ ಅವುಗಳೆದುರು ಪುಕ್ಕ ಬಿಚ್ಚಿಕೊಂಡು ಸದ್ದು ಮಾಡಿ ಹೆದರಿಸಿಲು ಹೀಗೆ ಮಾಡುತ್ತದೆ.
ಚಿತ್ರ-ಇಂಟರ್ ನೆಟ್ ಸಹಾಯ

Thursday, July 9, 2015

ಗೀಜಗ (Baya Weaver), Ploceus philippinus
ಗೀಜಗ ಹಕ್ಕಿಯ ಬಗ್ಗೆ ನಾವೇನಾದರೂ ಹೇಳಲು ಹೊರಟರೆ ಅದು ಅತಿಯಾಯಿತು ಅನಿಸುತ್ತೆ. ಗುಬ್ಬಚ್ಚಿ ಜಾತಿಗೆ ಸೇರಿದ ಈ ಹಕ್ಕಿ ಹುಲ್ಲಿನ ನಾರಿನಿಂದ ಕುಲಾವಿಯಾಕಾರದ ಗೂಡಗಳನ್ನು ನೇಯುವುದರಿಂದ ಕುಶಲ ಕಲೆಗಾಗಿ ಎಲ್ಲರಿಗೂ ಗೊತ್ತಿದೆ. ಮರಿ ಮಾಡುವ ಸಮಯದಲ್ಲಿ ತಲೆ ಹೊಟ್ಟೆ ಎದೆ ಹೊಳೆಯುವ ಬಣ್ಣಕ್ಕೆ ಇರುತ್ತವೆ. ಆ ಕಾಲದಲ್ಲಿ ಬಿಟ್ಟು ಮಿಕ್ಕ ಕಾಲದಲ್ಲಿ ಗುಬ್ಬಚ್ಚಿಯ ಬಣ್ಣದಲ್ಲೆ ಇರುತ್ತದೆ.
ಪ್ರಮುಖವಾಗಿ ಹೆಣ್ಣನ್ನು ಆಕರ್ಷಿಸಲು ಗಂಡು ಹಕ್ಕಿಯೂ ಗೂಡು ಕಟ್ಟುತ್ತದೆ. ಈ ಹಕ್ಕಿಗೆ ಕೊಕ್ಕು ದೃಢವಾಗಿ ಶಂಕುವಿನಾಕಾರಕ್ಕಿದೆ. ಗೂಡುಗಳ ನಿರ್ಮಾಣಕ್ಕೆ ಭತ್ತ ಹುಲ್ಲು ಮತ್ತು ಕಬ್ಬಿನ ನಾರನ್ನು ಪ್ರಮುಖವಾಗಿ ಗೂಡು ನೇಯಲು ಬಳಸಿಕೊಳ್ಳುತ್ತದೆ. ಗೀಜಗ ಹಕ್ಕಿಯೂ ಕೊಕ್ಕಿನ ಸಹಾಯದಿಂದ ಗೂಡನ್ನು ನೇಯುತ್ತದೆ. ಸೀಳಿ ತಂದ ನಾರನ್ನು ಕೊಕ್ಕಿನಿಂದಲೇ ತೂರಿಸಿ ಮತ್ತೆ ಕೊಕ್ಕಿನಿಂದಲೇ ಹೊರಗೆಳೆದು ಬಿಗಿ ಮಾಡುವುದನ್ನು ನೋಡುವುದೆ ಒಂದು ಚೆಂದ. ಭತ್ತ ಮತ್ತು ಕಬ್ಬಿನ ನಾರನ್ನು ಗದ್ದೆಯಿಂದಲೇ ನೇರವಾಗಿ ಸೀಳಿ ತಂದು ಗೂಡು ಕಟ್ಟುವುದರಿಂದ ಮೊದಲು ಹಸಿರಾಗಿರುತ್ತವೆ. ನಂತರದಲ್ಲಿ ಅವು ಒಣಗಿ ಕಂದು ಬಣ್ಣಕ್ಕೆ ತಿರುಗುತ್ತವೆ. ಗೂಡನ್ನು ಅರ್ಧಕ್ಕೆ ಕಟ್ಟಿ ನಂತರ ಹೆಣ್ಣನ್ನು ಆಕರ್ಷಿಸುತ್ತದೆ. ಆ ಹೆಣ್ಣು ಹಕ್ಕಿಯು ಬಂದು ಪರಿಶೀಲಿಸಿ ಸರಿಯಿದೆ ಎಂದು ಒಪ್ಪಿದೆ ಮೇಲೆ ಎರಡು ಒಂದಕ್ಕೊಂದು ಗೂಡಿನಿಂದ ಹೊರಗೆ ಸಂಧಿಸುತ್ತವೆ. ಒಪ್ಪಿಗೆಯಾಗದಿದ್ದರೆ ಗಂಡು ಹಕ್ಕಿಯೂ ಆ ಗೂಡನ್ನು ಅಷ್ಟಕ್ಕೇ ಬಿಟ್ಟು ಮತ್ತೊಂದನ್ನು ನಿರ್ಮಿಸಿ ಹೆಣ್ಣಿಗೆ ತೋರಿಸುತ್ತದೆ ಮತ್ತು ಈ ಪ್ರಕ್ರಿಯೆ ಮುಂದುವರೆಯುತ್ತದೆ. ಗೂಡು ಕುಲಾವಿಯಾಕಾರ ಮತ್ತು ತಲೆಕೆಳಕಾದ ಕಾಲುಚೀಲದಂತೆ ಕಾಣಿಸುತ್ತದೆ.
ಗೂಡು ಅಪೂರ್ಣವಾಗಿರುವಾಗಲೇ ಹೆಣ್ಣು ಹಕ್ಕಿಯೂ ಗೂಡನ್ನು ಪ್ರವೇಶಿಸಿ ಮೊಟ್ಟೆಗಳನ್ನು ಇಡುತ್ತದೆ. ಆಗ ಗೂಡಿನ ಪ್ರವೇಶದ್ವಾರವನ್ನು ಮುಚ್ಚುವ ಈ ಗಂಡು ಹಕ್ಕಿಯು ಆ ಗೂಡನ್ನು ತಾಯಿ ಮರಿಗಳ ಪೋಷಣೆಗೆ ಬಿಟ್ಟು ತನಗೆಂದು ಮತ್ತೊಂದು ಗೂಡು ಹೆಣೆದುಕೊಳ್ಳುತ್ತದೆ.
ಗೂಡು ಕಟ್ಟುವ ವಿಚಾರದಲ್ಲಿ ಈ ಹಕ್ಕಿಗಳ ಬಹಳ ಬುದ್ಧವಂತಿಕೆ ತೋರಿಸುವ ಈ ಹಕ್ಕಿಗಳು ಮೇ ಯಿಂದ ಸೆಪ್ಟೆಂಬರ್ ಅವಧಿಯಲ್ಲಿ ಚಿವ್..ಚಿವ್.. ಎಂದು ಹಾಡಿಕೊಂಡು ಗೂಡು ಕಟ್ಟುತ್ತದೆ. ಮನುಷ್ಯ, ಹಾವು, ಬೆಕ್ಕು ಮುಂತಾದವುಗಳಿಂದ ತಪ್ಪಿಸಿಕೊಳ್ಳಲು ಈಚಲುಗರಿಗಳ ತುದಿಯಲ್ಲಿ ಗೂಡನ್ನು ನಿರ್ಮಿಸುತ್ತವೆ. ಒಂದುವೇಳೆ ಗೂಡ ಕಟ್ಟಲು ಎತ್ತರವಾದ ಮರ ಸಿಗದಿದ್ದಾಗ ನದಿ, ಕೆರೆಗಳ ಕಮರಿಯೋ, ಬಾವಿಯೋ ಇರುವೆಡೆ ಬಾಗಿರುವ ಕೊಂಬೆಯ ತುಟ್ಟ ತುದಿಯಲ್ಲಿ ಯಾರಿಗೂ ನಿಲುಕದ ರೀತಿಯಲ್ಲಿ ಡು ಕಟ್ಟುತ್ತವೆ.
ಕೊಂಬೆಗೆ ಎಷ್ಟು ಭದ್ರವಾಗಿ ಹೆಣೆದಿರುತ್ತದೆ ಎಂದರೆ ಎಂತ ಗಾಳಿ ಬಂದರೂ ಅವು ಕಳಚಿ ಬಿದ್ದ ಉದಾಹರಣೆಗಳಿಲ್ಲ. ನೇಯ್ಗೆಯಲ್ಲಿ ಬಹಳ ಬುದ್ಧಿಶಕ್ತಿಯನ್ನೂ ಕುಶಲತೆಯನ್ನೂ ಪ್ರದರ್ಶಿಸಿದಂತೆ ಗೂಡಿನ ಒಳಗಡೆಯೂ ತುಂಬ ಸುಭದ್ರ ಮಾಡಿರುತ್ತದೆ. ಮೊಟ್ಟೆಯಿಡುವ ಭಾಗದ ತಳಕ್ಕೆ ಹಸಿ ಜೇಡಿಮಣ್ಣನ್ನು ಮೆತ್ತಿರುತ್ತದೆ. ಅಲ್ಲದೆ ಆ ಮಣ್ಣಿಗೆ ಮಿಣುಕು ಹುಳವನ್ನು ತಂದು ಸಿಕ್ಕಿಸಿಗೂಡಿನಲ್ಲಿ ಬೆಳಕು ಮಾಡಿಕೊಂಡಿರುತ್ತದೆ ಎಂದು ಹಲವರು ಹೇಳುವುದನ್ನು ಕೇಳಿದ್ದೇನೆ.
(ಈ ಕೆಳಗಿನ ಪ್ಯಾರವನ್ನು ಪೂರ್ಣಚಂದ್ರತೇಜಸ್ವಿ ಅವರ ಹೆಜ್ಜೆಮೂಡದ ಹಾದಿ ಪುಸ್ತಕದಿಂದ ಹೆಕ್ಕಿದ್ದು)
ಗೀಜಗನ ಗೂಡು ಅದರಲ್ಲಿ ಮೊಟ್ಟೆ ಇಡುವ ಹೆಣ್ಣು ಹಕ್ಕಿ ನೇಯ್ದಿದ್ದಲ್ಲ. ಗಂಡುಹಕ್ಕಿ ಗೂಡುಗಳನ್ನು ನೇಯ್ದು ಅದರ ಅಂದಚಂದಗಳನ್ನು ನೋಡಿ ಹೆಣ್ನು ಹಕ್ಕಿ ಬರಲೆಂದು ಗೂಡಿನ ಮೇಲೆ ಕುಳಿತುಕೊಂಡು ಹೋಗಿ ಬರುವ ಹೆಣ್ಣುಗಳನ್ನೆಲ್ಲಾ ಕೂಗುತ್ತಾ ಕಾಯುತ್ತದೆ. ಹೆಣ್ಣು ಹಕ್ಕಿ ಒಲಿದು ಬಂದು ಮೊಟ್ಟೆ ಇಟ್ಟಕೂಡಲೇ ಗಂಡು ಹಕ್ಕಿ ಆ ಗೂಡನ್ನು ತ್ಯಜಿಸಿ ಇನ್ನೊಂದು ಗೂಡು ಕಟ್ಟಲು ಶುರು ಮಾಡುತ್ತದೆ.
ಸಾಮಾನ್ಯವಾಗಿ ಹಕ್ಕಿಗಳ ಗೂಡಗಳ ಚಿತ್ರವನ್ನು ಹಾಕಬಾರದೆಂಬ ನಿಯಮವಿದೆ. ಆದರೆ ಗೀಜಗ ಗೂಡು ನೇಯುವುದರಲ್ಲೆ ಫೇಮಾಸ್ಸಾಗಿದ್ದರಿಂದ ಆ ಚಿತ್ರವನ್ನು ಅನಿವಾರ್ಯವಾಗಿ ಹಾಕಬೇಕಾಗಿ ಬಂದಿದೆ. ಪಕ್ಷಿ ಪ್ರೇಮಿಗಳು ತಪ್ಪಾಗಿ ತಿಳಿಯಬೇಡಿ..ಕ್ಷಮೆಯಿರಲಿ.
ಚಿತ್ರ ಕೃಪೆ Shylajesha Raja

Wednesday, July 8, 2015

ಕಾಗೆ 
ಕೋರ್ವಿಡೇ ಪಕ್ಷಿ ಸಂತತಿ ಕುಲಕ್ಕೆ ಸೇರಿದ ಒಂದು ಹಕ್ಕಿ ಈ ಕಾಗೆಗಳನ್ನು ನೋಡದವರೆ ಇಲ್ಲ. ಜಗತ್ತಿನ ಕೆಲವೇ ಕೆಲವು ಕಡೆ ಬಿಟ್ಟೆ ಇನ್ನೂಳಿದ ಎಲ್ಲ ಜಾಗಗಳಲ್ಲೂ ಕಾಗೆಗಳು ಕಾಣ ಸಿಗುತ್ತವೆ. ಕಾಗೆಗಳು ಜನವಸತಿಗೆ ಸಮೀಪವಾಗಿ ವಾಸ ಮಾಡುತ್ತವೆ. ಬೆಳಗಿನ ಹಾಗೂ ಸಂಜೆಯ ಹೊತ್ತು ಸದ್ದು ಮಾಡುತ್ತಾ ಗುಂಪುಗೂಡುವುದು ನಮ್ಮ ಪರಿಸರದಲ್ಲಿ ಸಾಧಾರಣವಾಗಿ ಕಾಣಸಿಗುತ್ತದೆ.
ದಪ್ಪ-ಗಟ್ಟಿಮುಟ್ಟಾದ ಕೊಕ್ಕು, ಆಕ್ರಮಣಕ್ಕೆ ಹೆಸರಾದವು. ವೇಗವಾಗಿ ರೆಕ್ಕೆ ಬಡಿದುಕೊಂಡು ಹಾರುವ, ನೇರವಾದ, ಸಬಲ ಹಾರಾಟ; ಆಕಾಶದೆತ್ತರದಲ್ಲಿ ರೆಕ್ಕೆ ಬಡಿಯದೇ ತೇಲುವುದುಂಟು. ಆಹಾರದ ವಿಷಯದಲ್ಲಿ ಯಾವುದೇ ಕಟ್ಟುಪಾಡಿಲ್ಲ. ಕಸದ ರಾಶಿಯನ್ನು ತಿಂದು ಕರಗಿಸುತ್ತವೆ. ಕಾಗೆಗಳ ಆಹಾರ ವೈವಿಧ್ಯಮಯವಾದದ್ದು. ಹಕ್ಕಿಗೂಡುಗಳಿಂದ ಹಕ್ಕಿ ಮರಿಗಳು, ಮೊಟ್ಟೆಗಳು, ಇಲಿಗಳೇ ಮೊದಲಾದ ಸಣ್ಣ ಪ್ರಾಣಿಗಳು ಹಾಗೂ ಇತರ ಸತ್ತ ಪ್ರಾಣಿಗಳು, ತರಕಾರಿಗಳು, ತ್ಯಾಜ್ಯವಸ್ತುಗಳು ಇವುಗಳ ಆಹಾರದಲ್ಲಿ ಸೇರುತ್ತವೆ. ಇವು ಹಕ್ಕಿ ಮರಿಗಳನ್ನು, ಮೊಟ್ಟೆಗಳನ್ನು ತಿನ್ನುವುದರಿಂದ ಇತರೆ ಹಕ್ಕಿಗಳು ಗುಂಪುಗೂಡಿ ಕಾಗೆಗಳನ್ನು ಓಡಿಸುವುದನ್ನು ಕಾಣಬಹುದು. ಹೊಲಗಳಲ್ಲಿ ಇವು ತರಕಾರಿ ಮತ್ತು ಧಾನ್ಯಗಳನ್ನು ತಿನ್ನುವುದನ್ನು ತಪ್ಪಿಸಲು ರೈತರು ಹುಲ್ಲಿನಿಂದ ಮಾಡಿದ ಮನುಷ್ಯ ರೂಪದ ಬೆರ್ಚಪ್ಪಗಳನ್ನು ನಿಲ್ಲಿಸುತ್ತಾರೆ.
ಕಾಗೆಗಳು ಎಲ್ಲಾ ತರಹದ ಮರಗಳಲ್ಲಿಯೂ ಗೂಡು ಕಟ್ಟುತ್ತವೆ. ಟೊಂಗೆಗಳನ್ನು ಉಪಯೋಗಿಸಿ ಗೂಡು ತಯಾರಿಸುತ್ತವೆ. ಕಾಗೆ ೩-೮ ಮೊಟ್ಟೆಗಳನ್ನು ಇಡುತ್ತದೆ. ಮರಿಗಳನ್ನು ತಂದೆ ಹಾಗೂ ತಾಯಿ ಕಾಗೆ ಎರಡೂ ಸಲಹುತ್ತವೆ.

ಕಾಡು ಕಾಗೆJungle crow( Corvus macrorhynchos)
ಮೈಯೆಲ್ಲ ಕಪ್ಪು ಬಣ್ಣ, ಹೆಣ್ಣುಗಂಡುಗಳಿಗೆ ವ್ಯತ್ಯಾಸವಿಲ್ಲ. ಇವು ಸಾಧಾರಣವಾಗಿ ಹಳ್ಳಿಗಳಲ್ಲಿ ಇರುತ್ತವೆ. ಇವು ಮೀತಿಮೀರುತ್ತಿರುವುದರಿಂದ ಇತರೆ ಪಕ್ಷಿಗಳಿಗೆ ಅಪಾಯ ಒದಗಿದೆ.
ಊರು ಕಾಗೆ House Crow (Corvus splendens)
ಕಾಡು ಕಾಗೆಯಂತೆ ಇದು ಸಂಪೂರ್ಣ ಕಪ್ಪಾಗಿರುವುದಿಲ್ಲ. ಕತ್ತಿನ ಬಳಿ ಬೂದು ಬಣ್ಣವಿರುತ್ತದೆ. ರೆಕ್ಕೆ ಬಳಿ ಮಾತ್ರ ಕಡುಗಪ್ಪು. ಸಂಜೆ ಎಲ್ಲ ಕಾಗೆಗಳೂ ಗುಂಪುಗೂಡಿ ಯಾವುದಾದರೂ ಒಂದು ದೊಡ್ಡ ಮರದಲ್ಲಿ ಕಾ..ಕಾ..ಎಂದು ಸದ್ದು ಕಾಲ ಕಳೆಯುತ್ತವೆ. ಬೆಳದಿಂಗಳಲ್ಲಿ ಒಮ್ಮೊಮ್ಮೆ ಬೆಳೆಗಾಯಿತು ಎಂದು ಕನ್ಫ್ಯೂಸ್ ಮಾಡಿಕೊಂಡು ಮಧ್ಯರಾತ್ರಿಯಲ್ಲೆ ಕಾ..ಕಾ.. ಎಂದು ಅರಚುತ್ತಿರುತ್ತವೆ.

ಪರಪುಟ್ಟ
ಕನ್ನಡದಲ್ಲಿ ಕಪ್ಪು ಬಣ್ಣಕ್ಕೆ ಕಾಗೆ ಉದಾರಣೆ ಕೊಡುವುದು ಸಾಮಾನ್ಯ. ಜತೆಗೆ ಕರ್ಕಶವಾಗಿ ಹಾಡಿದರೆ ಕಾಗೆ ತರ ಕಿರ್ಚತಾನೆ ಅಂತಾನೂ ವ್ಯಂಗ್ಯ ಮಾಡ್ತಾರೆ. ಕಾಗೆ ನಮ್ಮ ನಡುವೆಯೂ ಇದ್ದೂ ತಾತ್ಸರಕ್ಕೆ ಒಳಗಾಗಿವೆ. ಆದರೆ ಕಾಗೆ ಸಂತತಿ ಇಲ್ಲವಾದಲ್ಲಿ ಕೋಗಿಲೆಯೆ ಇರುತ್ತಿರಲಿಲ್ಲ ಅನ್ಸತೆ. ಕೋಗಿಲೆಯನ್ನು “ಪರಪುಟ್ಟ” ಅಂತ ಕರಿತಾರೆ. ಅಂದ್ರೆ ಪರಾವಲಂಬಿ ಪಕ್ಷಿ. ತಾನಿಟ್ಟ ಮೊಟ್ಟೆಗಳಿಗೆ ಕಾವೂ ಕೊಟ್ಟು ಮರಿ ಮಾಡಲು ಕೋಗಿಲಿಗೆ ಸಾಧ್ಯವಿಲ್ಲ. ಕಾಗೆಯ ಗೂಡಿನಲ್ಲಿ ತಂದು ಮೊಟ್ಟೆಗಳನ್ನು ತಂದಿಡುತ್ತದೆ. ಮೊಟ್ಟೆಗೆ ಕಾವುಕೊಟ್ಟು ಮರಿಮಾಡಿ ಧ್ವನಿ ಗೊತ್ತಾಗುವ ಹೊತ್ತಿಗೆ ಕೋಗಿಲೆ ಬೆಳೆದು ದೊಡ್ಡವದಾಗಿರುತ್ತವೆ. ಆ ಮೇಲೆ ಕೋಗಿಲೆ ಮರಿಗಳನ್ನು ಕಾಗೆ ಓಡಿಸುತ್ತವೆ.
.........................................................
ಕಾಗೆಗೆ ಸಂಸ್ಕೃತಿಯಲ್ಲೂ ಮಹತ್ವವಿದ್ದು, ಶನಿದೇವರು ತನ್ನ ವಾಹನವನ್ನಾಗಿ ಮಾಡಿಕೊಂಡಿದ್ದಾರೆ ಎಂದು ನಂಬಲಾಗಿದೆ. ಭಾರತ ಪ್ರಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅವರ ವ್ಯಂಗ್ಯಚಿತ್ರಗಳಲ್ಲಿ ಕಾಗೆ ಪ್ರಮುಖ ಸ್ಥಾನ ದೊರೆತಿತ್ತು. ಕಾಗೆ ತಲೆಗೆ ಕುಟುಕಬಾರದು ಅಪಶಕುನ ಎಂದು ನಂಬುವವರು ಇದ್ದಾರೆ. ಒಂದು ಅಗುಳ ಕಂಡರೆ ತನ್ನೆಲ್ಲ ಬಳಗವನ್ನು ಸೇರಿಸಿ ತಿನ್ನುವುದರಿಂದ ಕಾಗೆಗಳು ಸಮೂಹಜೀವಿಗಳಾಗಿವೆ. ಆದರೆ ಕೆಲವ ವರ್ಷಗಳ ಹಿಂದೆ ಶ್ರೀರಂಗಪಟ್ಟಣದ ಬಳಿ ಬಿಳಿ ಕಾಗೆಯೊಂದು ಪ್ರತ್ಯಕ್ಷವಾಗಿ ಕುತೂಹಲ ಮೂಡಿಸಿತ್ತು.

ಶ್ರೀರಂಗಪಟ್ಟಣದ ಬಳಿ ಕಾಣಿಸಿದ್ದ ಬಿಳಿ ಕಾಗೆ

Tuesday, July 7, 2015

ನವಿಲು, Indian Peafowl (Pavo cristatus)


ನಮ್ಮ ದೇಶದಲ್ಲಿ ನವಿಲನ್ನು ನೋಡದವರೆ ಇಲ್ಲ. ಮಕ್ಕಳಿಂದ ಮುದುಕರವರೆಗೆ ಪ್ರತಿಯೊಬ್ಬರೂ ನವಿಲಿನ ಬಣ್ಣದಿಂದ ಆಕರ್ಷಿತರಾದವರೇ.  ಬಾಲ್ಯದಲ್ಲಿ ಪ್ರತಿಯೊಬ್ಬರು ನವಿಲು ಗರಿಯನ್ನು ಪುಸ್ತಕದಲ್ಲಿ ಸಂಗ್ರಹಿಸಿರುತ್ತಾರೆ. ಅದು ಮರಿ ಹಾಕುತ್ತೆ ಅಂತ ಕುತೂಹಲದಿಂದ ದಿನ ಪುಸ್ತಕದ ಹಾಳೆ ತೆರೆದು ನೋಡುವುದು. ಜತೆಗೆ ಮನೆಯಲ್ಲಿ ಆಕರ್ಷಕವಾಗಿ ಅದನ್ನು ಕೆಲವು ಇಟ್ಟುಕೊಳ್ಳುತ್ತಿದ್ದರು.(ಈಗ ಅಪರಾದ). ಕವಿ ಪುಂಗವರಿಂದ ಹಿಡಿದು ಕಲಾಕಾರರಿಗೆ ಸ್ಪೂರ್ತಿಯಾಗಿದೆ. ನವಿಲು ಸಾಮಾನ್ಯ ಕಾಡುಗಳಲ್ಲೂ ಕಾಣಸಿಗುತ್ತದೆ. ಇಷ್ಟೇಲ್ಲಾ ಕಾರಣದಿಂದ ಇದು ಭಾರತದ ರಾಷ್ಟ್ರೀಯ ಪಕ್ಷಿಯಾಗಿದೆ. ಮಯೂರ ಎಂಬ ಮತ್ತೊಂದು ಹೆಸರಿನಿಂದ ಪರಿಚಿತ.
ಸಾಮಾನ್ಯವಾಗಿ ಹೆಣ್ಣು ಸೌಂದರ್ಯಕ್ಕೆ ಹೆಸರಾದವಳು. ಆದರೆ ಇಲ್ಲಿ ಉಲ್ಟಾ ಗಂಡು ನವಿಲೆ ಹೆಣ್ಣಿಗಿಂತ ಹೆಚ್ಚು ರೂಪವಂತನಾಗಿರುತ್ತದೆ. ಕಾಮನಬಿಲ್ಲಿನ ಬಣ್ಣಗಳಂತೆ ಆಕರ್ಷಕ ಗರಿಗಳನ್ನು ಹೊಂದಿರುತ್ತದೆ. ಹೆಣ್ಣು ನವಿಲನ್ನು ಆಕರ್ಷಿಸಲು ಗಂಡು ನವಿಲು ನೃತ್ಯ ಮಾಡುತ್ತದೆ .
ನೀಲಿ ಹಸಿರು ಮಿಶ್ರಿತ ಅಥವಾ ಹೊಳಪಿನ ಹಸಿರು ಬಣ್ಣದ ಗರಿಗಳನ್ನು ಹೊಂದಿರುತ್ತದೆ. ಉದ್ದನೆಯ ಗರಿಗಳ ಗುಚ್ಛವು ಹೃದಯದ ಆಕಾರದಲ್ಲಿ ಕೊನೆಗೊಂಡಿರುತ್ತದೆ. ಅಲ್ಲದೆ ಅದರ ಮಧ್ಯದಲ್ಲಿ ಕಣ್ಣಿನ ಆಕಾರವಿರುತ್ತದೆ. ಹೆಣ್ಣು ನವಿಲನ್ನು ಆಕರ್ಷಿಸಲು ಗಂಡು ನವಿಲು ಗರಿಗೆದರಿ ನೃತ್ಯ ಮಾಡುವಾಗ ಇದು ಸುಂದರವಾಗಿ ಕಾಣುತ್ತದೆ.
ಹೆಣ್ಣು ನವಿಲು ಮಸುಕಾದ ಹಸಿರು, ಬೂದು ಮತ್ತು ಕಂದುಬಣ್ಣ ಮಿಶ್ರಿತ ಗರಿಗಳ ಗುಚ್ಛವನ್ನು ಹೊಂದಿರುತ್ತದೆ. ಆದರೆ ಗಂಡು ಮತ್ತು ಹೆಣ್ಣು ನವಿಲುಗಳೆರಡೂ ತಮ್ಮ ತಲೆಯ ಮೇಲೆ ಮುಕುಟವನ್ನು ಹೊಂದಿರುತ್ತವೆ. ಈ ಮುಕುಟವನ್ನು ತನ್ನ ಮರಿಗಳ ರಕ್ಷಣೆಗಾಗಿ ಉಪಯೋಗಿಸುತ್ತವೆ. ಹೆಣ್ಣು ನವಿಲು ತನ್ನ ಮುಕುಟ ಅಥವಾ ಚೊಟ್ಟಿ ಅಥವಾ ಜುಟ್ಟನ್ನು ತನ್ನ ಮರಿಗಳ ರಕ್ಷಣೆಗಾಗಿ ಉಪಯೋಗಿಸುತ್ತದೆ. ಇಲ್ಲವೇ ಮಿಲನದ ಸಮಯದಲ್ಲಿ ಬೇರೆ ಹೆಣ್ಣುಗಳನ್ನು ಗದರಿಸಿ ಓಡಿಸಲೂ ಬಳಸುತ್ತದೆ.
ಕ್ಯೇ..ಓ…ಕ್ಯೇ…ಓ…ಕ್ಯೇ ಎಂದು ಕೂಗುವ ಇವುಗಳ ಆಹಾರ ಹಲ್ಲಿ, ಹಾವುಗಳು. ನೆಲಮಟ್ಟದ ಪೊದೆಗಳಲ್ಲಿ ಗೂಡುಕಟ್ಟುತ್ತವೆ. ಇವುಗಳ ಸಂತಾನೋತ್ಪತ್ತಿ ಸಮಯ ಜನವರಿಯಿಂದ ಅಕ್ಟೋಬರ್ ನಡುವೆ. ಒಮ್ಮೆ 4ರಿಂದ 7 ಕೆನೆಬಣ್ಣದ ಮೊಟ್ಟೆಗಳನ್ನಿಡುತ್ತವೆ. ಸುಮಾರು 29 ದಿನ ಕಾವು ಕೊಟ್ಟು ಮರಿ ಮಾಡುತ್ತವೆ.
…………………………………………………………………………………

ಭಾರತದ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿರುವ ನಮ್ಮ ಶಿಲ್ಪಕಲೆ, ಸಾಹಿತ್ಯ, ಸಂಗೀತಗಳೆದಲ್ಲರಲ್ಲೂ ಸರ್ವಾಂತರ್ಯಾಮಿಯಾಗಿರುವ ಪಕ್ಷಿಗಳ್ಲಲಿ ಮೊದಲನೆ ಸ್ಥಾನ ನವಿಲಗೆ. ಎಷ್ಟೋ ಜನರಿಗೆ ನವಿಲು ಕೋಳಿ ಜಾತಿಗೆ ಸೇರಿದ ಹಕ್ಕಿ ಎಂಬುದೇ ಗೊತ್ತಿಲ್ಲ. ಜಗತ್ತಿನಲ್ಲಿ ನವಿಲನಷ್ಟೇ ಬಣ್ಣದ ಹಕ್ಕಿಗಳಿದ್ದರೂ ಇದರಲ್ಲಿರುವ ವರ್ಣ ಸಂಯೋಜನೆ ಮತ್ತು ವಿನ್ಯಾಸಗಳು ದುರ್ಲಭ. ಕನ್ನಡ ನಾಡಿನಲ್ಲಿ ಎಲ್ಲೆಡೆ ಕಾಣುತ್ತಿದ್ದ ಇವು ವ್ಯವಸಾಯ ಭೂಮಿ ವಿಸ್ತರಿಸುತ್ತಿರುವುದರಿಂದ ಕಡಿಮೆಯಾಗುತ್ತಿವೆ.
ಕೆ.ಪಿ.ಪೂರ್ಣಚಂದ್ರತೇಜಸ್ವಿ, (ಹೆಜ್ಜೆ ಮೂಡದ ಹಾದಿ ಪುಸ್ತಕದಿಂದ ಹೆಕ್ಕಿದ್ದು)

Monday, July 6, 2015

ಬಾರ್ಬೆಟ್ ಗಳು

ಸಾಮಾನ್ಯವಾಗಿ ಈ ಬಾರ್ಬೆಟ್ ಗಳನ್ನ ಕುಟಿಗ ಮತ್ತು ಕುಟ್ರಹಕ್ಕಿ ಎಂದು ಕನ್ನಡದಲ್ಲಿ ವಿಭಾಗಿಸಿದ್ದಾರೆ. ಈ ಕುಟ್ರಹಕ್ಕಿಗಳು ಕುಟ್ರು ಕುಟ್ರು…ಎಂದು ಸದ್ದು ಮಾಡುತ್ತವೆ. ಆದರೆ ಈ ಕುಟಿಗಗಳು ಮಾತ್ರ ಟೊಂಕ್..ಟೊಂಕ್ ಎಂದು ಕೂಗುತ್ತವೆ.
ಈ ಹಕ್ಕಿಗಳು ಹಾಲುವಾಣ, ನುಗ್ಗೆ, ಮುಂತಾದ  ಮೆದು ಮರಗಳನ್ನು ಕೊರೆದು ಪೊಟರೆ ಮಾಡಿಕೊಳ್ಳುತ್ತದೆ. ಬೀಜ ಪ್ರಸರಣೆಯಲ್ಲಿ ಮಹತ್ತರ ಪಾತ್ರ ವಹಿಸುವ ಇವು ಹಣ್ಣನ್ನು ತಿಂದು ಬೀಜಗಳನ್ನು ಹಿಕ್ಕೆ ಹಾಕುವುದರಿಂದ ಕಾಡಿನ ಬೆಳವಣಿಗೆಗೆ ಸಹಕಾರಿಯಾಗಿವೆ.  ಕೊಕ್ಕಿನ ಬುಡದಲ್ಲಿರುವ ಕೂದಲಿನಲ್ಲಿ ಪರಾಗಗಳು ಅಂಟಿಕೊಂಡು, ಪರಾಗಸ್ಪರ್ಶದಲ್ಲಿ ಭಾಗವಹಿಸುತ್ತವೆ. ಎಲೆಗಳ ಮಧ್ಯೆ ಮರೆಮಾಚುವ ಹಸಿರು ಬಣ್ಣವಿದ್ದು, ದಪ್ಪನಾದ, ತುಸು ಬಾಗಿದ ಕೊಕ್ಕು; ಕೊಕ್ಕಿನ ಬುಡದಲ್ಲಿ ಉದ್ದನಾದ ಮೀಸೆಯಿದೆ. ಮಾವಿನ ಮರದ ಹತ್ತಿರ ಇರುವ ಕೀಟಗಳನ್ನು ತಿಂದು ಬೆಳೆಗೆ ಬರುವ ರೋಗಳನ್ನು ತಪ್ಪಿಸುತ್ತದೆ. ಹಾಗಾಗಿ ಇದು ಕಾಡು ಮತ್ತು ರೈತನ ಮಿತ್ರ ಎನ್ನಬಹುದು.

ಕುಟ್ರು ಹಕ್ಕಿ White-cheeked Barbet (Megalaima viridis) 

ಕುಟ್ರುಪಕ್ಷಿ, ಗುಟ್ರ ಪಕ್ಷಿ, ಗುಟರ್ ಗುಮ್ಮ ಅಂತೆಲ್ಲ ಕರಿತಾರೆ. ನೀವು ಯಾವುದಾದರೂ ಕಾಡಿಗೆ ಹೋಗಿದ್ದರೆ ಕುಟ್ರ ಹಕ್ಕಿಯ ಸದ್ದನ್ನು ಕೇಳಿರಲೇಬೇಕು. ಮಲೆನಾಡಿನ ಕಾಡುಗಳಲ್ಲಿ ಬೆಳಗಿನ ಬಹುಪಾಲು ಈ ಹಕ್ಕಿಗಳು ಗಂಟು ಕಿತ್ತುಹರಿಯುವಂತೆ ಕುಟ್ರೂ..ಕುಟ್ರೂ ಅಂತ ಕೂಗುತ್ತಿರುವುತ್ತವೆ. ಅಲ್ಲದೆ ಮುಖ್ಯವಾಗಿ ಮೈನಾ, ಕಾಗೆಗಳಂತೆ ಇವು ಸರ್ವ ವ್ಯಾಪಿಗಳು ನಗರ ಪ್ರದೇಶದಲ್ಲೂ ಅತೀ ಸಾಮಾನ್ಯವಾಗಿ ಈ ಹಕ್ಕಿಯನ್ನು ನೋಡದಿದ್ದರು ಕೂಗನ್ನು ಮಾತ್ರ ಕೇಳಬಹುದು.
ಡಿಸೆಂಬರ್ ನಿಂದ ಜೂನ್ ವರೆಗೆ ಸಂತಾನೋತ್ಪತ್ತಿ ನಡೆಸುತ್ತವೆ. ಎಲೆ ಹಸಿರು ಹಕ್ಕಿಯಾದ್ದರಿಂದ ಸಾಮಾನ್ಯವಾಗಿ ಕಣ್ಣಿಗೆ ಬೀಳುವುದಿಲ್ಲ. ಆದರೆ ಪಕ್ಷಿ ವೀಕ್ಷಣೆ ರೂಢಿಸಿಕೊಂಡವರಿಗೆ ಇದು ಕಾಮನ್ ಬರ್ಡ್ ಆಗಿರುತ್ತದೆ. ಎಲೆ ಹಸಿರು ದೇಹ, ಬಿಳಿ ಗೀರುಗಳಿರುವ ಕಂದು ತಲೆ ಮತ್ತು ಎದೆ: ಕೆನ್ನೆಯ ಮೇಲೆ ಬಿಳಿ ಮಚ್ಚೆಗಳಿದ್ದು, ಕಣ್ಣಿನ ಸುತ್ತ ಬಿಳಿ ಬಣ್ಣದ ಉಂಗುರದ ಆಕಾರವಿದೆ. ಮೋಟು ಬಾಲವಿರುತ್ತದೆ.

ಕೆಂಕತ್ತಿನ ಕಂಚುಕುಟಿಗ Crimson-throated Barbet (Megalaima rubricapillus) ಮತ್ತು


ಕಂಚುಗಾರ ಕುಟಿಗ Coppersmith Barbet Crimson-breasted Barbet (Megalaima haemacephala) 

ಚೆಂಬು ಕುಟಿಗ ಮತ್ತು  ಕಂಚುಗಾರ ಕುಟಿಗ ನಮ್ಮಲ್ಲಿ ಕಂಡುಬರುವ ಮತ್ತೆರಡು ಸಣ್ಣ ಗಾತ್ರದ ಕುಟ್ರಹಕ್ಕಿಗಳು ಗಂಡ ಹೆಣ್ಣು  ಎರಡು ಹಕ್ಕಿಗಳು ಛಂಧೋಬದ್ದವಾಗಿ ಟೊಂಯಕ್ ಟೊಂಯಕ್ ಎಂದು ಒಂದೇ ಸಮ ನಿರಂತರವಾಗಿ ಕೂಗುತ್ತವೆ. ಇದರ ಕೂಗು ತಾಮ್ರದ ಮೇಲೆ ಸುತ್ತಿಗೆಯಿಂದ ಬಡಿದಾಗ ಬರುವ ಸದ್ದಿನಂತಿದೆ ಹಾಗಾಗಿ ಇದಕ್ಕೆ ಇಂಗ್ಲೀಷ ನಲ್ಲಿ ' ಕಾಪರ್ ಸ್ಮಿತ್ ಬಾರ್ಬೆಟ್ ' ಎಂದು ಹೆಸರು (ಗೋಲ್ಡ್ ಸ್ಮಿತ್ ರೀತಿ). ಅದನ್ನೆ ಕನ್ನಡದಲ್ಲಿ ಚಂಬು ಕುಟಿಗ, ಕಂಚುಗಾರ ಕುಟಿಗ ಎನ್ನುತ್ತಾರೆ.
ಎರಡು ಪ್ರಬೇಧದ ಹಕ್ಕಿಗಳು ಅರಳಿ, ಬಸರಿ ಹಣ್ಣುಗಳು ಬಿಟ್ಟಾಗ ಆ ಮರಗಳಲ್ಲಿ ಗುಂಪು ಗುಂಪಾಗಿ ಕಾಣಬಹುದು.
ಕೆಂಕತ್ತಿನ ಕಂಚುಕುಟಿಗ: ಎಲೆಹಸಿರು ಹಕ್ಕಿಗೆ ತಿಳಿನೀಲಿ ಕೆನ್ನೆಗೆ ಎದೆ ಮತ್ತು ಮಖವನ್ನು ಕುಂಕುಮದಲ್ಲಿ ಅದ್ದಿ ತೆಗೆದಂತೆ ಇರುತ್ತದೆ. ಎದ್ದುಕಾಣುವ ಕೆಂ ನೆತ್ತಿ, ಹಣೆ, ಗಲ್ಲವಿದೆ.
ಕಂಚುಕುಟಿಗ (ಚೆಂಬುಕುಟ್ಟಿ) ಈ ಹಕ್ಕಿಯು ಎಲೆಹಸಿರು ಮೈಬಣ್ಣವನ್ನು ಹೊಂದಿದ್ದು, ಹಣೆ ಮತ್ತು ಎದೆ ಕೆಂಪು, ಗಲ್ಲ ಮತ್ತು ಕಣ್ಣಿನ ಉಂಗುರ ಹಳದಿ ಬಣ್ಣಕ್ಕೆ ಇರುತ್ತದೆ.
ಚಿತ್ರ ಕೃಪೆ ಇಂಟರ್ನೆಟ್