Thursday, July 9, 2015

ಗೀಜಗ (Baya Weaver), Ploceus philippinus
ಗೀಜಗ ಹಕ್ಕಿಯ ಬಗ್ಗೆ ನಾವೇನಾದರೂ ಹೇಳಲು ಹೊರಟರೆ ಅದು ಅತಿಯಾಯಿತು ಅನಿಸುತ್ತೆ. ಗುಬ್ಬಚ್ಚಿ ಜಾತಿಗೆ ಸೇರಿದ ಈ ಹಕ್ಕಿ ಹುಲ್ಲಿನ ನಾರಿನಿಂದ ಕುಲಾವಿಯಾಕಾರದ ಗೂಡಗಳನ್ನು ನೇಯುವುದರಿಂದ ಕುಶಲ ಕಲೆಗಾಗಿ ಎಲ್ಲರಿಗೂ ಗೊತ್ತಿದೆ. ಮರಿ ಮಾಡುವ ಸಮಯದಲ್ಲಿ ತಲೆ ಹೊಟ್ಟೆ ಎದೆ ಹೊಳೆಯುವ ಬಣ್ಣಕ್ಕೆ ಇರುತ್ತವೆ. ಆ ಕಾಲದಲ್ಲಿ ಬಿಟ್ಟು ಮಿಕ್ಕ ಕಾಲದಲ್ಲಿ ಗುಬ್ಬಚ್ಚಿಯ ಬಣ್ಣದಲ್ಲೆ ಇರುತ್ತದೆ.
ಪ್ರಮುಖವಾಗಿ ಹೆಣ್ಣನ್ನು ಆಕರ್ಷಿಸಲು ಗಂಡು ಹಕ್ಕಿಯೂ ಗೂಡು ಕಟ್ಟುತ್ತದೆ. ಈ ಹಕ್ಕಿಗೆ ಕೊಕ್ಕು ದೃಢವಾಗಿ ಶಂಕುವಿನಾಕಾರಕ್ಕಿದೆ. ಗೂಡುಗಳ ನಿರ್ಮಾಣಕ್ಕೆ ಭತ್ತ ಹುಲ್ಲು ಮತ್ತು ಕಬ್ಬಿನ ನಾರನ್ನು ಪ್ರಮುಖವಾಗಿ ಗೂಡು ನೇಯಲು ಬಳಸಿಕೊಳ್ಳುತ್ತದೆ. ಗೀಜಗ ಹಕ್ಕಿಯೂ ಕೊಕ್ಕಿನ ಸಹಾಯದಿಂದ ಗೂಡನ್ನು ನೇಯುತ್ತದೆ. ಸೀಳಿ ತಂದ ನಾರನ್ನು ಕೊಕ್ಕಿನಿಂದಲೇ ತೂರಿಸಿ ಮತ್ತೆ ಕೊಕ್ಕಿನಿಂದಲೇ ಹೊರಗೆಳೆದು ಬಿಗಿ ಮಾಡುವುದನ್ನು ನೋಡುವುದೆ ಒಂದು ಚೆಂದ. ಭತ್ತ ಮತ್ತು ಕಬ್ಬಿನ ನಾರನ್ನು ಗದ್ದೆಯಿಂದಲೇ ನೇರವಾಗಿ ಸೀಳಿ ತಂದು ಗೂಡು ಕಟ್ಟುವುದರಿಂದ ಮೊದಲು ಹಸಿರಾಗಿರುತ್ತವೆ. ನಂತರದಲ್ಲಿ ಅವು ಒಣಗಿ ಕಂದು ಬಣ್ಣಕ್ಕೆ ತಿರುಗುತ್ತವೆ. ಗೂಡನ್ನು ಅರ್ಧಕ್ಕೆ ಕಟ್ಟಿ ನಂತರ ಹೆಣ್ಣನ್ನು ಆಕರ್ಷಿಸುತ್ತದೆ. ಆ ಹೆಣ್ಣು ಹಕ್ಕಿಯು ಬಂದು ಪರಿಶೀಲಿಸಿ ಸರಿಯಿದೆ ಎಂದು ಒಪ್ಪಿದೆ ಮೇಲೆ ಎರಡು ಒಂದಕ್ಕೊಂದು ಗೂಡಿನಿಂದ ಹೊರಗೆ ಸಂಧಿಸುತ್ತವೆ. ಒಪ್ಪಿಗೆಯಾಗದಿದ್ದರೆ ಗಂಡು ಹಕ್ಕಿಯೂ ಆ ಗೂಡನ್ನು ಅಷ್ಟಕ್ಕೇ ಬಿಟ್ಟು ಮತ್ತೊಂದನ್ನು ನಿರ್ಮಿಸಿ ಹೆಣ್ಣಿಗೆ ತೋರಿಸುತ್ತದೆ ಮತ್ತು ಈ ಪ್ರಕ್ರಿಯೆ ಮುಂದುವರೆಯುತ್ತದೆ. ಗೂಡು ಕುಲಾವಿಯಾಕಾರ ಮತ್ತು ತಲೆಕೆಳಕಾದ ಕಾಲುಚೀಲದಂತೆ ಕಾಣಿಸುತ್ತದೆ.
ಗೂಡು ಅಪೂರ್ಣವಾಗಿರುವಾಗಲೇ ಹೆಣ್ಣು ಹಕ್ಕಿಯೂ ಗೂಡನ್ನು ಪ್ರವೇಶಿಸಿ ಮೊಟ್ಟೆಗಳನ್ನು ಇಡುತ್ತದೆ. ಆಗ ಗೂಡಿನ ಪ್ರವೇಶದ್ವಾರವನ್ನು ಮುಚ್ಚುವ ಈ ಗಂಡು ಹಕ್ಕಿಯು ಆ ಗೂಡನ್ನು ತಾಯಿ ಮರಿಗಳ ಪೋಷಣೆಗೆ ಬಿಟ್ಟು ತನಗೆಂದು ಮತ್ತೊಂದು ಗೂಡು ಹೆಣೆದುಕೊಳ್ಳುತ್ತದೆ.
ಗೂಡು ಕಟ್ಟುವ ವಿಚಾರದಲ್ಲಿ ಈ ಹಕ್ಕಿಗಳ ಬಹಳ ಬುದ್ಧವಂತಿಕೆ ತೋರಿಸುವ ಈ ಹಕ್ಕಿಗಳು ಮೇ ಯಿಂದ ಸೆಪ್ಟೆಂಬರ್ ಅವಧಿಯಲ್ಲಿ ಚಿವ್..ಚಿವ್.. ಎಂದು ಹಾಡಿಕೊಂಡು ಗೂಡು ಕಟ್ಟುತ್ತದೆ. ಮನುಷ್ಯ, ಹಾವು, ಬೆಕ್ಕು ಮುಂತಾದವುಗಳಿಂದ ತಪ್ಪಿಸಿಕೊಳ್ಳಲು ಈಚಲುಗರಿಗಳ ತುದಿಯಲ್ಲಿ ಗೂಡನ್ನು ನಿರ್ಮಿಸುತ್ತವೆ. ಒಂದುವೇಳೆ ಗೂಡ ಕಟ್ಟಲು ಎತ್ತರವಾದ ಮರ ಸಿಗದಿದ್ದಾಗ ನದಿ, ಕೆರೆಗಳ ಕಮರಿಯೋ, ಬಾವಿಯೋ ಇರುವೆಡೆ ಬಾಗಿರುವ ಕೊಂಬೆಯ ತುಟ್ಟ ತುದಿಯಲ್ಲಿ ಯಾರಿಗೂ ನಿಲುಕದ ರೀತಿಯಲ್ಲಿ ಡು ಕಟ್ಟುತ್ತವೆ.
ಕೊಂಬೆಗೆ ಎಷ್ಟು ಭದ್ರವಾಗಿ ಹೆಣೆದಿರುತ್ತದೆ ಎಂದರೆ ಎಂತ ಗಾಳಿ ಬಂದರೂ ಅವು ಕಳಚಿ ಬಿದ್ದ ಉದಾಹರಣೆಗಳಿಲ್ಲ. ನೇಯ್ಗೆಯಲ್ಲಿ ಬಹಳ ಬುದ್ಧಿಶಕ್ತಿಯನ್ನೂ ಕುಶಲತೆಯನ್ನೂ ಪ್ರದರ್ಶಿಸಿದಂತೆ ಗೂಡಿನ ಒಳಗಡೆಯೂ ತುಂಬ ಸುಭದ್ರ ಮಾಡಿರುತ್ತದೆ. ಮೊಟ್ಟೆಯಿಡುವ ಭಾಗದ ತಳಕ್ಕೆ ಹಸಿ ಜೇಡಿಮಣ್ಣನ್ನು ಮೆತ್ತಿರುತ್ತದೆ. ಅಲ್ಲದೆ ಆ ಮಣ್ಣಿಗೆ ಮಿಣುಕು ಹುಳವನ್ನು ತಂದು ಸಿಕ್ಕಿಸಿಗೂಡಿನಲ್ಲಿ ಬೆಳಕು ಮಾಡಿಕೊಂಡಿರುತ್ತದೆ ಎಂದು ಹಲವರು ಹೇಳುವುದನ್ನು ಕೇಳಿದ್ದೇನೆ.
(ಈ ಕೆಳಗಿನ ಪ್ಯಾರವನ್ನು ಪೂರ್ಣಚಂದ್ರತೇಜಸ್ವಿ ಅವರ ಹೆಜ್ಜೆಮೂಡದ ಹಾದಿ ಪುಸ್ತಕದಿಂದ ಹೆಕ್ಕಿದ್ದು)
ಗೀಜಗನ ಗೂಡು ಅದರಲ್ಲಿ ಮೊಟ್ಟೆ ಇಡುವ ಹೆಣ್ಣು ಹಕ್ಕಿ ನೇಯ್ದಿದ್ದಲ್ಲ. ಗಂಡುಹಕ್ಕಿ ಗೂಡುಗಳನ್ನು ನೇಯ್ದು ಅದರ ಅಂದಚಂದಗಳನ್ನು ನೋಡಿ ಹೆಣ್ನು ಹಕ್ಕಿ ಬರಲೆಂದು ಗೂಡಿನ ಮೇಲೆ ಕುಳಿತುಕೊಂಡು ಹೋಗಿ ಬರುವ ಹೆಣ್ಣುಗಳನ್ನೆಲ್ಲಾ ಕೂಗುತ್ತಾ ಕಾಯುತ್ತದೆ. ಹೆಣ್ಣು ಹಕ್ಕಿ ಒಲಿದು ಬಂದು ಮೊಟ್ಟೆ ಇಟ್ಟಕೂಡಲೇ ಗಂಡು ಹಕ್ಕಿ ಆ ಗೂಡನ್ನು ತ್ಯಜಿಸಿ ಇನ್ನೊಂದು ಗೂಡು ಕಟ್ಟಲು ಶುರು ಮಾಡುತ್ತದೆ.
ಸಾಮಾನ್ಯವಾಗಿ ಹಕ್ಕಿಗಳ ಗೂಡಗಳ ಚಿತ್ರವನ್ನು ಹಾಕಬಾರದೆಂಬ ನಿಯಮವಿದೆ. ಆದರೆ ಗೀಜಗ ಗೂಡು ನೇಯುವುದರಲ್ಲೆ ಫೇಮಾಸ್ಸಾಗಿದ್ದರಿಂದ ಆ ಚಿತ್ರವನ್ನು ಅನಿವಾರ್ಯವಾಗಿ ಹಾಕಬೇಕಾಗಿ ಬಂದಿದೆ. ಪಕ್ಷಿ ಪ್ರೇಮಿಗಳು ತಪ್ಪಾಗಿ ತಿಳಿಯಬೇಡಿ..ಕ್ಷಮೆಯಿರಲಿ.
ಚಿತ್ರ ಕೃಪೆ Shylajesha Raja

No comments:

Post a Comment