Sunday, July 5, 2015

ಬಣ್ಣದ ಕೊಕ್ಕರೆ (Painted Stork, Mycteria Leucocephala) 

ಸಾಮಾನ್ಯವಾಗಿ ಕೊಕ್ಕರೆ ಅಂದ್ರೆ ಬೆಳ್ಳಗೆ ಇರುತ್ತೆ ಅಂತಾರೆ. ಬೆಳ್ಳಗಿರೋದೆಲ್ಲ ಹೇಗೆ ಹಾಲ್ವಲ್ಲೊ ಹಾಗೆ ಬಿಳಿಯಾಗಿರುವುದು ಮಾತ್ರವಲ್ಲದೆ ಬಣ್ಣದ ಕೊಕ್ಕರೆಯೂ ಇದೆ.
ಹದ್ದಿನಷ್ಟು ದೊಡ್ಡದಾದ ಈ ಹಕ್ಕಿ ಕೊಕ್ಕು ಮುಂಭಾಗದಲ್ಲಿ ಕೊಂಚ ಕೊಂಕಿದೆ. ರೆಕ್ಕೆಗಳ ಮೇಲೆ ಕುಸುರಿ ಕೆಲಸ ಮಾಡಿದಂತೆ ಕಪ್ಪು ಗೀರುಗಳಿವೆ. ರೆಕ್ಕೆಯ ಕೆಳಭಾಗದಲ್ಲಿ ನವುರಾದ ಗುಲಾಬಿ ಬಣ್ಣ ಮನಮೋಹಕವಾಗಿದೆ. ನೆತ್ತಿಯ ಮೇಲಿನ ಕೇಸರಿ ಮಿಶ್ರಿತ ಕೆಂಬಣ್ಣ ಸಿಂದೂರ ಲೇಪಿಸಿಕೊಂಡಂತೆ ಇರುವುದರಿಂದರ ಇದಕ್ಕೆ `ಸಿಂದೂರು' ಕೊಕ್ಕರೆ ಎಂಬ ಮತ್ತೊಂದು ಹೆಸರು ಬಂದಿದೆ. ಸ್ಥಳೀಯವಾಗಿ ಇದ್ದನ್ನು ಕೆರೆ ಹದ್ದು ಅಂತಲೂ ಕರೆತಾರೆ.
ಕಾಲುವೆ, ಕೆರೆ, ಹಳ್ಳ ಒಟ್ಟಾರೆ ನೀರಿರುವ ಪ್ರದೇಶದಲ್ಲಿ ಇದನ್ನು ಸಹಜವಾಗಿ ನೋಡಬಹುದು. ರಂಗನತಿಟ್ಟಿಗೆ ಬೇಟಿ ನೀಡಿದರೆ ಈ ಹಕ್ಕಿ ಖಾಯಂ ಆಗಿ ಸಿಗುತ್ತದೆ. ದೊಡ್ಡದಾಗಿರುವುದರಿಂದ ಈ ಹಕ್ಕಿಯನ್ನು ಗುರುತಿಸುವುದು ಸುಲಭ. ಹಾವಿನಂತೆ ಬಳುಕುವ ಕತ್ತು, ಅಪ್ಸರೆಯಂತೆ ನಡೆಯುತ್ತದೆ. ಹಲವು ವೇಳೆ ದೊಡ್ಡ ಗುಂಪಿನಲ್ಲಿ ಮೇಯುವುದನ್ನು ನೋಡಬಹುದು. ಬೆನ್ನನ್ನು ಬಗ್ಗಿಸಿಕೊಂಡು ನೀರಿನಲ್ಲಿ ಬೇಟೆಯನ್ನು ಹುಡುಕುತ್ತಿರುತ್ತದೆ. ಮೀನು, ಕಪ್ಪೆ, ಹಲ್ಲಿ ಕೀಟ ಇದರ ಆಹಾರ. ಮಾರ್ಚ್ ತಿಂಗಳಿಂದ ಮೇ ತನಕ ಕಡ್ಡಿ, ಎಲೆ, ಒಣಹುಲ್ಲು ಮತ್ತು ಚಿಕ್ಕ ಗಿಡಗಳನ್ನು ಕಿತ್ತು ವೃತ್ತಾಕಾರದಲ್ಲಿ ಗುಡನ್ನು ನಿರ್ಮಿಸುವ ಇದು 3-4 ಮೊಟ್ಟೆಗಳನ್ನು ಇಟ್ಟು, ಒಂದು ತಿಂಗಳ ಮಟ್ಟಿಗೆ ಕಾವುಕೊಡುತ್ತದೆ. ಮರದ ಮೇಲ್ಬಾಗದಲ್ಲಿ ಸಾಮಾಹಿಕವಾಗಿ ಗೂಡು ಕಟ್ಟುವ ಈ ಹಕ್ಕಿಯೂ ಪ್ರಕೃತಿ ನಿಯಮದಂತೆ ತಾನೂ ತಂದ ಆಹಾರವನ್ನು ಮತ್ತೊಂದು ಹಕ್ಕಿಗೆ ನೀಡುವುದಿಲ್ಲ. ಸುಮಾರು 28 ವರ್ಷ ಬದುಕುತ್ತದೆ ಎಂದು ಪಕ್ಷಿ ತಜ್ಞರು ಅಂದಾಜಿಸುತ್ತಾರೆ.
ಚಿತ್ರ ಕೃಪೆ-ಇಂಟರ್ ನೆಟ್

No comments:

Post a Comment