Thursday, July 2, 2015

ಕಾಜಾಣ

ಮಳ್ಳಿ ಮಳ್ಳಿ ಮಿಂಚುಳ್ಳಿ, ಜಾಣ ಜಾಣಾ ಕಾಜಾಣ. ಅಂತ ಕಾಜಾಣದ ಹೆಸರು ಕೇಳದವರಿಲ್ಲ. ಅದರಲ್ಲೂ ಕುವೆಂಪು ಅವರ ಸಾಹಿತ್ಯ ಓದಿದವರಿಗೂ, ಉದಯರವಿ ಪ್ರಕಾಶನದ ಪುಸ್ತಕಗಳನ್ನು ನೋಡಿದವರಿಗೂ ಈ ಪಕ್ಷಿ ಚಿರಪರಿಚಿತ. ಕಾಡಿನ ಕಾವಲುಗಾರರೆಂದೇ ಕರೆಯಲ್ಪಡುವ ಕಾಜಾಣವನ್ನು ಮರಾಠಿಯಲ್ಲಿ ಕೊತ್ವಾಲ್ ಅಂತಾರೆ. ಇದು ರೌಡಿ ಕಾಗೆ ಅಂತಲೂ ಹೇಳ್ತಾರೆ. ತನ್ನ ಗೂಡಿನ ಬಳಿ ಬರುವ ಯಾವುದೇ ಪಕ್ಷಿಯ ಮೇಲೆ ಪ್ರತಿ ದಾಳಿ ನಡೆಸುತ್ತದೆ. ಕೆಲವು ಪಕ್ಷಿಗಳನ್ನು ಕಿಲೋ ಮೀಟರ್ ಗಟ್ಟಲೆ ಅಟ್ಟಿಸಿಕೊಂಡು ಹೋಗುತ್ತದೆ. ಜತೆಗೆ ಎಷ್ಟೋ ಸಲ ಮೊಟ್ಟೆ ಕದಿಯಲು ಬರುವ ಹಾವಿನೊಂದಿಗೆ ಜಗಳಕ್ಕೆ ಇಳಿಯುತ್ತದೆ. ಪಕ್ಷಿ ಪ್ರಪಂಚದಲ್ಲೆ ಧೈರ್ಯಶಾಲಿ ಹಕ್ಕಿ. ತಮ್ಮ ತಂಟೆಗೆ ಬಂದ ಯಾವುದೇ ಜೀವಿಯನ್ನೂ ಹೊಡೆದೋಡಿಸುವುದರಲ್ಲಿ ನಿಷ್ಣಾತ. ಆದ್ದರಿಂದ, ಹಕ್ಕಿ ಗೂಡು ಕಟ್ಟುವಲ್ಲಿ ಎಷ್ಟೋ ದುರ್ಬಲ ಹಕ್ಕಿಗಳು ತಮ್ಮ ಗೂಡನ್ನು ಕಟ್ಟಿಕೊಂಡು ರಕ್ಷಣೆ ಪಡೆಯುತ್ತವೆ. ಪ್ರಮುಖವಾಗಿ ನಮ್ಮ ಭಾಗದಲ್ಲಿ ಕಾಜಾಣ, ಭೀಮರಾಜ (ತಂತಿಬಾಲದ ಕಾಜಾಣ), ಬೂದೂ ಕಾಜಾಣ ಮಾತ್ರ ಕಾಣಸಿಗುತ್ತವೆ. 

ಕಾಜಾಣ Black Drongo (Dicrurus macrocercus)

ಕಾಜಾಣವನ್ನು ಸ್ಥಳೀಯವಾಗಿ ಕರಿಭುಜಂಗ, ಕಾಕಳಿಚಿಟ್ಟೆ, ಕೋತವಾಲಹಕ್ಕಿ, ರಾಜ ಕಾಗೆ, ಕರಿಕಾಗೆ ಅಂತ ಕರಿತಾರೆ. ಪಿಕಳಾರದಷ್ಟು ದಪ್ಪವಿರುತ್ತದೆ. ಉದ್ದವಾದ ಸೀಳುಬಾಲ, ಕವಲಾಗಿದ್ದು, ಮೀನಿನ ಬಾಲದಂತೆ ಮೊನಚಾಗಿರುತ್ತದೆ. ಸಣ್ಣ ಗುಂಪಿನಲ್ಲಿ, ಸದಾಹಸಿರು, ಕುರುಚಲು ಕಾಡುಗಳಲ್ಲಿ, ಕೃಷಿ ಪ್ರದೇಶದಲ್ಲಿರುತ್ತದೆ. ಒಣರೆಂಬೆಯ ಮೇಲೋ, ತಂತಿಯ ಮೇಲೋ ಕುಳಿತು ಬೇಟೆಗೆ ಹೊಂಚುಹಾಕುತ್ತವೆ ಅಥವಾ ಗೋವುಗಳ ಮೇಲೆ ಕುಳಿತು, ಅವು ಮೇಯುತ್ತಿರುವಾಗ ಅಲುಗಾಟಕ್ಕೆ ಮೇಲೆದ್ದ ಕೀಟಗಳ ಮೇಲೆಗರಿ ಭಕ್ಷಿಸುತ್ತವೆ.ಚಿಕ್ಕ ಹಲ್ಲಿ, ಹಾವುರಾಣಿ ಮೊದಲಾದುವುಗಳನ್ನು ಹಿಡಿದರೆ ಕಾಲಿನಲ್ಲಿ ಹಿಡಿದು ಹರಿದು ತಿನ್ನುತ್ತವೆ.
ಮಾರ್ಚ್ ತಿಂಗಳಿಂದ ಜೂನ್ ವರೆಗೆ ಮೊಟ್ಟೆಗಳಿಡುವ ಇದು ಮೃದುವಾದ ಜೇಡರ ಬಲೆಗಳನ್ನು ಸೇರಿಸಿ ಹೊರ ಮೈಯ್ಯನ್ನು ಹೊಲೆದು ಗೂಡು ಕಟ್ಟುತ್ತದೆ. ಚೀ..ಚೀ..ಚೀ..ಕೆಲವೊಮ್ಮೆ ಚರ್…ಚರ್…ಚರ್ ಕರ್ಕಶವಾಗಿ ಕೂಗುತ್ತದೆ. ಹಾಗೂ ಇತರ ಪಕ್ಷಿಗಳ ಕೂಗನ್ನು ಅನುಸರಿಸುತ್ತವೆ. ಕಾಡುಗೆ ಬೆಂಕಿ ಬಿದ್ದಾಗ ಅದರಿಂದ ಹಾರುವ ಕೀಟಗಳನ್ನು ಹಿಡಿದು ತಿನ್ನುವುದುನ್ನು ನಾನು ಉಲ್ಲಾಸ ಕಾರಂತರ ನಾಗರಹೊಳೆ ಡಾಕ್ಯುಮೆಂಟರಿಯಲ್ಲಿ ನೋಡಿದ್ದೇನೆ.

ಭೀಮರಾಜ Greater Racket-tailed Drongo (Dicrurus paradiseus)

ಕೇರಳದ ರಾಜ್ಯ ಪಕ್ಷಿಯಾಗಿರುವ ಇದನ್ನು ಕುವೆಂಪು ಅವರಿಗೆ ಅಚ್ಚುಮೆಚ್ಚು. ಇದನ್ನು ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಾಣಬಹುದು. ಭೀಮರಾಜ ಹಕ್ಕಿಯನ್ನು ತಂತಿ ಬಾಲದ ಕಾಜಾಣ, ಬೀಮರಾಜ ಎಂದು ಕರೆಯುತ್ತಾರೆ. ಗೊರವಂಕಕ್ಕಿಂತ ದೊಡ್ಡದಾದ ಕಾಗೆಗಿಂತ ಚಿಕ್ಕದಾದ ಮಿರುಗುವ ಪಕ್ಷಿ, ಹಣೆಯ ಮೇಲಿನ ಕಪ್ಪು ಪುಕ್ಕಗಳು ತಲೆ ಕೂದಲು ಕೆದರಿಕೊಂಡಂತೆ ಕಾಣುತ್ತದೆ. ಬಾಲದ ಹೊರಗರಿಗಳು ನೀಳವಾದ ರಕೆ ಕಡ್ಡಿಗಳಂತಿದ್ದು, ತುದಿಯಲ್ಲಿ ಸಣ್ಣ ಬಾವುಟಗಳು, ಹಾರುವಾಗ ಎರಡು ದುಂಬಿಗಳು ಹಕ್ಕಿಯನ್ನು ಹಿಂಬಾಲಿಸುತ್ತಿವೆಯೋ ಎಂಬಂತೆ ಕಾಣುವುದು. ಮಾರ್ಚ್ ತಿಂಗಳಿಂದ ಜೂನ್ ತನಕ ಸಂತಾನೋತ್ಪತ್ತಿಯಲ್ಲಿ ತೊಡಗುವ ಈ ಹಕ್ಕಿಯೂ ಕಡ್ಡಿ, ಹುಲ್ಲು, ಜೇಡರ ಬಲೆಯಿಂದ ಗೂಡನ್ನು ಕಟ್ಟತ್ತದೆ.
ಕುಟ್ರೇಂ, ಕುಟ್ರೇಂ ಟ್ರಿಂಕ್ ಎಂದು ಕೂಗು ಇದು ಇತರೆ ಪಕ್ಷಿಗಳ ಗೂಡನ್ನು ಅನುಸರಿಸುತ್ತದೆ. ಕಾಡಿನಲ್ಲಿ ಕೀಟ ಶಿಕಾರಿ ಮಾಡುವ ಹಕ್ಕಿಗಳ ಗುಂಪಿನಲ್ಲಿ ಇದು ಪ್ರಧಾನ ಪಾತ್ರ ವಹಿಸುತ್ತದೆ. ಮಂಜಾನೆಯಲ್ಲೂ ಮತ್ತು ಸಂಜೆಯಲ್ಲಿ ಹಾಡುವ ರಾಗಾಲಾಪನೆ ಪ್ರಸಿದ್ದವಾಗಿದೆ. ಹಿಮಾಲಯದ ತೇಗ ಮತ್ತು ಬಿದಿರಿನ ಕಾಡುಗಳೇ ಇವುಗಳ ನಿಜವಾದ ನೆಲೆ. ಈ ಗೂಡಿನಲ್ಲಿ ಕೆಂಪು ಚುಕ್ಕಿಗಳಿರುವ ಕೆನೆಬಣ್ಣದ 3-4 ಮೊಟ್ಟೆಗಳನ್ನು ಇಡುತ್ತವೆ.

ಬೂದೂ ಕಾಜಾಣ Ashy Drongo (Dicrurus leucophaecens)

ಭುಜಂಗದಂತಿರುವ ಕಾರಣ ಇದನ್ನು ಧೌರೀ ಭುಜಂಗಾ ಎನ್ನುತ್ತಾರೆ. ಸಣ್ಣ ಗಾತ್ರ. ಪಿಕಳಾರ ಹಕ್ಕಿ ಗ್ರಾತಕ್ಕಿರುತ್ತದೆ. ಹೊಟ್ಟೆ ಹಾಗೂ ಕವಲು ಬಾಲದ ತಳಭಾಗ ಮಾಸಲು ಬಿಳಿಯಾಗಿತ್ತದೆ. ಬೂದು ಕೊರಳು, ಬಿಳಿ ಹೊಟ್ಟೆಯಿಂದ ಪತ್ತೆಹಚ್ಚಬಹುದು. ಚಿಕ್ಕ ಕೊಕ್ಕು ಕಪ್ಪಗಿರುತ್ತದೆ. ಉದುರೆಲೆ, ಕುರುಚಲು, ಬಿದಿರುಕಾಡು, ಎಸ್ಟೇಟುಗಳಲ್ಲಿ ಕಾಣಬಹುದು. ಚೀ,,,,ಚೀ…ಚೀ ಎಂದು ಅರಚುವ ಇದು ಕೆಲವು ವೇಳೆ ಇತರ ಪಕ್ಷಿಗಳ ಕೂಗನ್ನು ಅನುಸರಿಸುತ್ತದೆ. ಕಾಜಾಣ, ತಂತಿ ಬಾಲದ ಕಾಜಾಣದಂತೆ ಮಾಚ್ ನಿಂದ ಜೂನ್ ವರೆಗೆ ಮೊಟ್ಟೆಗಳನ್ನಿಡುತ್ತದೆ. ಜೇಡರ ಬಲೆ ಮತ್ತು ಮೃದವಾದ ಕಡ್ಡಿಗಳಿಂದ ಗೂಡು ಕಟ್ಟುತ್ತದೆ.

ಚಿತ್ರಗಳು ಇಂಟರ್ ನೆಟ್ ಸಹಾಯ.


No comments:

Post a Comment