Monday, July 6, 2015

ಬಾರ್ಬೆಟ್ ಗಳು

ಸಾಮಾನ್ಯವಾಗಿ ಈ ಬಾರ್ಬೆಟ್ ಗಳನ್ನ ಕುಟಿಗ ಮತ್ತು ಕುಟ್ರಹಕ್ಕಿ ಎಂದು ಕನ್ನಡದಲ್ಲಿ ವಿಭಾಗಿಸಿದ್ದಾರೆ. ಈ ಕುಟ್ರಹಕ್ಕಿಗಳು ಕುಟ್ರು ಕುಟ್ರು…ಎಂದು ಸದ್ದು ಮಾಡುತ್ತವೆ. ಆದರೆ ಈ ಕುಟಿಗಗಳು ಮಾತ್ರ ಟೊಂಕ್..ಟೊಂಕ್ ಎಂದು ಕೂಗುತ್ತವೆ.
ಈ ಹಕ್ಕಿಗಳು ಹಾಲುವಾಣ, ನುಗ್ಗೆ, ಮುಂತಾದ  ಮೆದು ಮರಗಳನ್ನು ಕೊರೆದು ಪೊಟರೆ ಮಾಡಿಕೊಳ್ಳುತ್ತದೆ. ಬೀಜ ಪ್ರಸರಣೆಯಲ್ಲಿ ಮಹತ್ತರ ಪಾತ್ರ ವಹಿಸುವ ಇವು ಹಣ್ಣನ್ನು ತಿಂದು ಬೀಜಗಳನ್ನು ಹಿಕ್ಕೆ ಹಾಕುವುದರಿಂದ ಕಾಡಿನ ಬೆಳವಣಿಗೆಗೆ ಸಹಕಾರಿಯಾಗಿವೆ.  ಕೊಕ್ಕಿನ ಬುಡದಲ್ಲಿರುವ ಕೂದಲಿನಲ್ಲಿ ಪರಾಗಗಳು ಅಂಟಿಕೊಂಡು, ಪರಾಗಸ್ಪರ್ಶದಲ್ಲಿ ಭಾಗವಹಿಸುತ್ತವೆ. ಎಲೆಗಳ ಮಧ್ಯೆ ಮರೆಮಾಚುವ ಹಸಿರು ಬಣ್ಣವಿದ್ದು, ದಪ್ಪನಾದ, ತುಸು ಬಾಗಿದ ಕೊಕ್ಕು; ಕೊಕ್ಕಿನ ಬುಡದಲ್ಲಿ ಉದ್ದನಾದ ಮೀಸೆಯಿದೆ. ಮಾವಿನ ಮರದ ಹತ್ತಿರ ಇರುವ ಕೀಟಗಳನ್ನು ತಿಂದು ಬೆಳೆಗೆ ಬರುವ ರೋಗಳನ್ನು ತಪ್ಪಿಸುತ್ತದೆ. ಹಾಗಾಗಿ ಇದು ಕಾಡು ಮತ್ತು ರೈತನ ಮಿತ್ರ ಎನ್ನಬಹುದು.

ಕುಟ್ರು ಹಕ್ಕಿ White-cheeked Barbet (Megalaima viridis) 

ಕುಟ್ರುಪಕ್ಷಿ, ಗುಟ್ರ ಪಕ್ಷಿ, ಗುಟರ್ ಗುಮ್ಮ ಅಂತೆಲ್ಲ ಕರಿತಾರೆ. ನೀವು ಯಾವುದಾದರೂ ಕಾಡಿಗೆ ಹೋಗಿದ್ದರೆ ಕುಟ್ರ ಹಕ್ಕಿಯ ಸದ್ದನ್ನು ಕೇಳಿರಲೇಬೇಕು. ಮಲೆನಾಡಿನ ಕಾಡುಗಳಲ್ಲಿ ಬೆಳಗಿನ ಬಹುಪಾಲು ಈ ಹಕ್ಕಿಗಳು ಗಂಟು ಕಿತ್ತುಹರಿಯುವಂತೆ ಕುಟ್ರೂ..ಕುಟ್ರೂ ಅಂತ ಕೂಗುತ್ತಿರುವುತ್ತವೆ. ಅಲ್ಲದೆ ಮುಖ್ಯವಾಗಿ ಮೈನಾ, ಕಾಗೆಗಳಂತೆ ಇವು ಸರ್ವ ವ್ಯಾಪಿಗಳು ನಗರ ಪ್ರದೇಶದಲ್ಲೂ ಅತೀ ಸಾಮಾನ್ಯವಾಗಿ ಈ ಹಕ್ಕಿಯನ್ನು ನೋಡದಿದ್ದರು ಕೂಗನ್ನು ಮಾತ್ರ ಕೇಳಬಹುದು.
ಡಿಸೆಂಬರ್ ನಿಂದ ಜೂನ್ ವರೆಗೆ ಸಂತಾನೋತ್ಪತ್ತಿ ನಡೆಸುತ್ತವೆ. ಎಲೆ ಹಸಿರು ಹಕ್ಕಿಯಾದ್ದರಿಂದ ಸಾಮಾನ್ಯವಾಗಿ ಕಣ್ಣಿಗೆ ಬೀಳುವುದಿಲ್ಲ. ಆದರೆ ಪಕ್ಷಿ ವೀಕ್ಷಣೆ ರೂಢಿಸಿಕೊಂಡವರಿಗೆ ಇದು ಕಾಮನ್ ಬರ್ಡ್ ಆಗಿರುತ್ತದೆ. ಎಲೆ ಹಸಿರು ದೇಹ, ಬಿಳಿ ಗೀರುಗಳಿರುವ ಕಂದು ತಲೆ ಮತ್ತು ಎದೆ: ಕೆನ್ನೆಯ ಮೇಲೆ ಬಿಳಿ ಮಚ್ಚೆಗಳಿದ್ದು, ಕಣ್ಣಿನ ಸುತ್ತ ಬಿಳಿ ಬಣ್ಣದ ಉಂಗುರದ ಆಕಾರವಿದೆ. ಮೋಟು ಬಾಲವಿರುತ್ತದೆ.

ಕೆಂಕತ್ತಿನ ಕಂಚುಕುಟಿಗ Crimson-throated Barbet (Megalaima rubricapillus) ಮತ್ತು


ಕಂಚುಗಾರ ಕುಟಿಗ Coppersmith Barbet Crimson-breasted Barbet (Megalaima haemacephala) 

ಚೆಂಬು ಕುಟಿಗ ಮತ್ತು  ಕಂಚುಗಾರ ಕುಟಿಗ ನಮ್ಮಲ್ಲಿ ಕಂಡುಬರುವ ಮತ್ತೆರಡು ಸಣ್ಣ ಗಾತ್ರದ ಕುಟ್ರಹಕ್ಕಿಗಳು ಗಂಡ ಹೆಣ್ಣು  ಎರಡು ಹಕ್ಕಿಗಳು ಛಂಧೋಬದ್ದವಾಗಿ ಟೊಂಯಕ್ ಟೊಂಯಕ್ ಎಂದು ಒಂದೇ ಸಮ ನಿರಂತರವಾಗಿ ಕೂಗುತ್ತವೆ. ಇದರ ಕೂಗು ತಾಮ್ರದ ಮೇಲೆ ಸುತ್ತಿಗೆಯಿಂದ ಬಡಿದಾಗ ಬರುವ ಸದ್ದಿನಂತಿದೆ ಹಾಗಾಗಿ ಇದಕ್ಕೆ ಇಂಗ್ಲೀಷ ನಲ್ಲಿ ' ಕಾಪರ್ ಸ್ಮಿತ್ ಬಾರ್ಬೆಟ್ ' ಎಂದು ಹೆಸರು (ಗೋಲ್ಡ್ ಸ್ಮಿತ್ ರೀತಿ). ಅದನ್ನೆ ಕನ್ನಡದಲ್ಲಿ ಚಂಬು ಕುಟಿಗ, ಕಂಚುಗಾರ ಕುಟಿಗ ಎನ್ನುತ್ತಾರೆ.
ಎರಡು ಪ್ರಬೇಧದ ಹಕ್ಕಿಗಳು ಅರಳಿ, ಬಸರಿ ಹಣ್ಣುಗಳು ಬಿಟ್ಟಾಗ ಆ ಮರಗಳಲ್ಲಿ ಗುಂಪು ಗುಂಪಾಗಿ ಕಾಣಬಹುದು.
ಕೆಂಕತ್ತಿನ ಕಂಚುಕುಟಿಗ: ಎಲೆಹಸಿರು ಹಕ್ಕಿಗೆ ತಿಳಿನೀಲಿ ಕೆನ್ನೆಗೆ ಎದೆ ಮತ್ತು ಮಖವನ್ನು ಕುಂಕುಮದಲ್ಲಿ ಅದ್ದಿ ತೆಗೆದಂತೆ ಇರುತ್ತದೆ. ಎದ್ದುಕಾಣುವ ಕೆಂ ನೆತ್ತಿ, ಹಣೆ, ಗಲ್ಲವಿದೆ.
ಕಂಚುಕುಟಿಗ (ಚೆಂಬುಕುಟ್ಟಿ) ಈ ಹಕ್ಕಿಯು ಎಲೆಹಸಿರು ಮೈಬಣ್ಣವನ್ನು ಹೊಂದಿದ್ದು, ಹಣೆ ಮತ್ತು ಎದೆ ಕೆಂಪು, ಗಲ್ಲ ಮತ್ತು ಕಣ್ಣಿನ ಉಂಗುರ ಹಳದಿ ಬಣ್ಣಕ್ಕೆ ಇರುತ್ತದೆ.
ಚಿತ್ರ ಕೃಪೆ ಇಂಟರ್ನೆಟ್

1 comment:

  1. MAHITHIYUKTHA LEKHANA,ONDU KOOGIDARE ENNODU JOTHEYAGIKOOGUVA WHITE CHEEKED BARBETNA KORUS DHWANI KELALU CHENNA,KENKATHINA KANCHUKUTIGANA NODUVUDU CHENDA,SUNDARAVADA LEKHANA,NAMMALI WHITE CHEEKED BARBET GILI MADIDA POTAREYANNU KOREDU THENGINA ADIKE MARADALLI GOODU MADUTHAVE,KALU MENASU ATHI ,AALADA HANNU EDAKKE BALU PRIYA

    ReplyDelete