Tuesday, July 7, 2015

ನವಿಲು, Indian Peafowl (Pavo cristatus)


ನಮ್ಮ ದೇಶದಲ್ಲಿ ನವಿಲನ್ನು ನೋಡದವರೆ ಇಲ್ಲ. ಮಕ್ಕಳಿಂದ ಮುದುಕರವರೆಗೆ ಪ್ರತಿಯೊಬ್ಬರೂ ನವಿಲಿನ ಬಣ್ಣದಿಂದ ಆಕರ್ಷಿತರಾದವರೇ.  ಬಾಲ್ಯದಲ್ಲಿ ಪ್ರತಿಯೊಬ್ಬರು ನವಿಲು ಗರಿಯನ್ನು ಪುಸ್ತಕದಲ್ಲಿ ಸಂಗ್ರಹಿಸಿರುತ್ತಾರೆ. ಅದು ಮರಿ ಹಾಕುತ್ತೆ ಅಂತ ಕುತೂಹಲದಿಂದ ದಿನ ಪುಸ್ತಕದ ಹಾಳೆ ತೆರೆದು ನೋಡುವುದು. ಜತೆಗೆ ಮನೆಯಲ್ಲಿ ಆಕರ್ಷಕವಾಗಿ ಅದನ್ನು ಕೆಲವು ಇಟ್ಟುಕೊಳ್ಳುತ್ತಿದ್ದರು.(ಈಗ ಅಪರಾದ). ಕವಿ ಪುಂಗವರಿಂದ ಹಿಡಿದು ಕಲಾಕಾರರಿಗೆ ಸ್ಪೂರ್ತಿಯಾಗಿದೆ. ನವಿಲು ಸಾಮಾನ್ಯ ಕಾಡುಗಳಲ್ಲೂ ಕಾಣಸಿಗುತ್ತದೆ. ಇಷ್ಟೇಲ್ಲಾ ಕಾರಣದಿಂದ ಇದು ಭಾರತದ ರಾಷ್ಟ್ರೀಯ ಪಕ್ಷಿಯಾಗಿದೆ. ಮಯೂರ ಎಂಬ ಮತ್ತೊಂದು ಹೆಸರಿನಿಂದ ಪರಿಚಿತ.
ಸಾಮಾನ್ಯವಾಗಿ ಹೆಣ್ಣು ಸೌಂದರ್ಯಕ್ಕೆ ಹೆಸರಾದವಳು. ಆದರೆ ಇಲ್ಲಿ ಉಲ್ಟಾ ಗಂಡು ನವಿಲೆ ಹೆಣ್ಣಿಗಿಂತ ಹೆಚ್ಚು ರೂಪವಂತನಾಗಿರುತ್ತದೆ. ಕಾಮನಬಿಲ್ಲಿನ ಬಣ್ಣಗಳಂತೆ ಆಕರ್ಷಕ ಗರಿಗಳನ್ನು ಹೊಂದಿರುತ್ತದೆ. ಹೆಣ್ಣು ನವಿಲನ್ನು ಆಕರ್ಷಿಸಲು ಗಂಡು ನವಿಲು ನೃತ್ಯ ಮಾಡುತ್ತದೆ .
ನೀಲಿ ಹಸಿರು ಮಿಶ್ರಿತ ಅಥವಾ ಹೊಳಪಿನ ಹಸಿರು ಬಣ್ಣದ ಗರಿಗಳನ್ನು ಹೊಂದಿರುತ್ತದೆ. ಉದ್ದನೆಯ ಗರಿಗಳ ಗುಚ್ಛವು ಹೃದಯದ ಆಕಾರದಲ್ಲಿ ಕೊನೆಗೊಂಡಿರುತ್ತದೆ. ಅಲ್ಲದೆ ಅದರ ಮಧ್ಯದಲ್ಲಿ ಕಣ್ಣಿನ ಆಕಾರವಿರುತ್ತದೆ. ಹೆಣ್ಣು ನವಿಲನ್ನು ಆಕರ್ಷಿಸಲು ಗಂಡು ನವಿಲು ಗರಿಗೆದರಿ ನೃತ್ಯ ಮಾಡುವಾಗ ಇದು ಸುಂದರವಾಗಿ ಕಾಣುತ್ತದೆ.
ಹೆಣ್ಣು ನವಿಲು ಮಸುಕಾದ ಹಸಿರು, ಬೂದು ಮತ್ತು ಕಂದುಬಣ್ಣ ಮಿಶ್ರಿತ ಗರಿಗಳ ಗುಚ್ಛವನ್ನು ಹೊಂದಿರುತ್ತದೆ. ಆದರೆ ಗಂಡು ಮತ್ತು ಹೆಣ್ಣು ನವಿಲುಗಳೆರಡೂ ತಮ್ಮ ತಲೆಯ ಮೇಲೆ ಮುಕುಟವನ್ನು ಹೊಂದಿರುತ್ತವೆ. ಈ ಮುಕುಟವನ್ನು ತನ್ನ ಮರಿಗಳ ರಕ್ಷಣೆಗಾಗಿ ಉಪಯೋಗಿಸುತ್ತವೆ. ಹೆಣ್ಣು ನವಿಲು ತನ್ನ ಮುಕುಟ ಅಥವಾ ಚೊಟ್ಟಿ ಅಥವಾ ಜುಟ್ಟನ್ನು ತನ್ನ ಮರಿಗಳ ರಕ್ಷಣೆಗಾಗಿ ಉಪಯೋಗಿಸುತ್ತದೆ. ಇಲ್ಲವೇ ಮಿಲನದ ಸಮಯದಲ್ಲಿ ಬೇರೆ ಹೆಣ್ಣುಗಳನ್ನು ಗದರಿಸಿ ಓಡಿಸಲೂ ಬಳಸುತ್ತದೆ.
ಕ್ಯೇ..ಓ…ಕ್ಯೇ…ಓ…ಕ್ಯೇ ಎಂದು ಕೂಗುವ ಇವುಗಳ ಆಹಾರ ಹಲ್ಲಿ, ಹಾವುಗಳು. ನೆಲಮಟ್ಟದ ಪೊದೆಗಳಲ್ಲಿ ಗೂಡುಕಟ್ಟುತ್ತವೆ. ಇವುಗಳ ಸಂತಾನೋತ್ಪತ್ತಿ ಸಮಯ ಜನವರಿಯಿಂದ ಅಕ್ಟೋಬರ್ ನಡುವೆ. ಒಮ್ಮೆ 4ರಿಂದ 7 ಕೆನೆಬಣ್ಣದ ಮೊಟ್ಟೆಗಳನ್ನಿಡುತ್ತವೆ. ಸುಮಾರು 29 ದಿನ ಕಾವು ಕೊಟ್ಟು ಮರಿ ಮಾಡುತ್ತವೆ.
…………………………………………………………………………………

ಭಾರತದ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿರುವ ನಮ್ಮ ಶಿಲ್ಪಕಲೆ, ಸಾಹಿತ್ಯ, ಸಂಗೀತಗಳೆದಲ್ಲರಲ್ಲೂ ಸರ್ವಾಂತರ್ಯಾಮಿಯಾಗಿರುವ ಪಕ್ಷಿಗಳ್ಲಲಿ ಮೊದಲನೆ ಸ್ಥಾನ ನವಿಲಗೆ. ಎಷ್ಟೋ ಜನರಿಗೆ ನವಿಲು ಕೋಳಿ ಜಾತಿಗೆ ಸೇರಿದ ಹಕ್ಕಿ ಎಂಬುದೇ ಗೊತ್ತಿಲ್ಲ. ಜಗತ್ತಿನಲ್ಲಿ ನವಿಲನಷ್ಟೇ ಬಣ್ಣದ ಹಕ್ಕಿಗಳಿದ್ದರೂ ಇದರಲ್ಲಿರುವ ವರ್ಣ ಸಂಯೋಜನೆ ಮತ್ತು ವಿನ್ಯಾಸಗಳು ದುರ್ಲಭ. ಕನ್ನಡ ನಾಡಿನಲ್ಲಿ ಎಲ್ಲೆಡೆ ಕಾಣುತ್ತಿದ್ದ ಇವು ವ್ಯವಸಾಯ ಭೂಮಿ ವಿಸ್ತರಿಸುತ್ತಿರುವುದರಿಂದ ಕಡಿಮೆಯಾಗುತ್ತಿವೆ.
ಕೆ.ಪಿ.ಪೂರ್ಣಚಂದ್ರತೇಜಸ್ವಿ, (ಹೆಜ್ಜೆ ಮೂಡದ ಹಾದಿ ಪುಸ್ತಕದಿಂದ ಹೆಕ್ಕಿದ್ದು)

No comments:

Post a Comment